ಬೆಂಗಳೂರು: ಹೊಸ ಸಚಿವ ಸಂಪುಟ ರಚನೆಗೆ ಸಜ್ಜಾಗಿರುವ ಕಾಂಗ್ರೆಸ್‌ನಲ್ಲಿ ಮಂತ್ರಿ ಸ್ಥಾನಕ್ಕಾಗಿ ಶಾಸಕರ ಪೈಪೋಟಿ ಜೋರಾಗಿದೆ. ಕೆಲವರು ಹೈಕಮಾಂಡ್ ನಾಯಕರ ಬಳಿ ಲಾಬಿ ನಡೆಸುತ್ತಿದ್ದರೆ, ಇನ್ನೂ ಕೆಲವರು ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ಮತ್ತೊಂದೆಡೆ ಹಂಗಾಮಿ ಸಿಎಂ Siddaramaiah ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ಕಲ್ಪಿಸುವಂತೆ ಶಾಸಕರು ಮನವಿ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರಲ್ಲಿ ಮಂತ್ರಿಗಿರಿ ಕಸರತ್ತು ತೀವ್ರಗೊಂಡಿದೆ. ಹೊಸ ಸಂಪುಟದಲ್ಲಿ ಸ್ಥಾನ ಪಡೆಯಲು ಅನೇಕ ಶಾಸಕರು ಹಂಗಾಮಿ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದತ್ತ ಮುಖ ಮಾಡಿದ್ದಾರೆ. ಹೇಗಾದರೂ ಮಾಡಿ ಡಿಕೆಶಿ ನೇತೃತ್ವದ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ನಾಯಕರು ನಿರಂತರ ಸಂಪರ್ಕ ಸಾಧಿಸುತ್ತಿದ್ದಾರೆ.
ಸಿದ್ದರಾಮಯ್ಯ ನಿವಾಸಕ್ಕೆ ಶಾಸಕಾಂಗದ ಹಲವು ನಾಯಕರು ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಶಾಸಕರಾದ K. J. George, Zameer Ahmed Khan, Rizwan Arshad, ರಘುಮೂರ್ತಿ, ಗೋವಿಂದಪ್ಪ, ಅಶೋಕ್ ಪಟ್ಟಣ್, ಪುಟ್ಟರಂಗಶೆಟ್ಟಿ, ಎಂಎಲ್‌ಸಿ Ivan D'Souza ಸೇರಿದಂತೆ ಹಲವರು ಕಾವೇರಿ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ಭೇಟಿ ಬಳಿಕ ಪ್ರತಿಕ್ರಿಯಿಸಿದ ಐವಾನ್ ಡಿಸೋಜಾ, ಕ್ರಿಶ್ಚಿಯನ್ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದು, ತಮ್ಮನ್ನೂ ಆಕಾಂಕ್ಷಿ ಎಂದು ತಿಳಿಸಿದ್ದಾರೆ. ಅಲ್ಲದೇ ತಮ್ಮ ಸಮುದಾಯದ K. J. George ಅವರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಇನ್ನೊಂದೆಡೆ ಚಳ್ಳಕೆರೆ ಶಾಸಕ ರಘುಮೂರ್ತಿ ಕೂಡ ಸಚಿವ ಸ್ಥಾನಕ್ಕಾಗಿ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಹೈಕಮಾಂಡ್ ತನ್ನ ಸೇವೆಯನ್ನು ಪರಿಗಣಿಸಿ ಅವಕಾಶ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಹೊಸದುರ್ಗ ಶಾಸಕ ಗೋವಿಂದಪ್ಪ ಕೂಡ ಮಂತ್ರಿ ಸ್ಥಾನಕ್ಕಾಗಿ ಆಕಾಂಕ್ಷಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ನಡುವೆ, ಸಿದ್ದರಾಮಯ್ಯ ಅವಧಿಯಲ್ಲಿ ಕಾನೂನು ಸಲಹೆಗಾರರಾಗಿದ್ದ ಶಾಸಕ ಪೊನ್ನಣ್ಣ ಅವರ ಹೆಸರು ಕೂಡ ಸಚಿವ ಸ್ಥಾನಕ್ಕೆ ಕೇಳಿಬರುತ್ತಿದೆ. ಪೊನ್ನಣ್ಣ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದು, ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಮೊದಲಿನಿಂದಲೂ ಇದೆ ಎಂದು ಹೇಳಿದ್ದಾರೆ. ಜನರ ಆಶಯಕ್ಕೂ ಅನುಗುಣವಾಗಿ ಜಿಲ್ಲೆಗೆ ಪ್ರತಿನಿಧಿತ್ವ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದರು.
ಇತ್ತ ಸಿದ್ದರಾಮಯ್ಯ ಪುತ್ರ Yathindra Siddaramaiah ಮೌನ ವಹಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇಷ್ಟು ದಿನ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರಬೇಕು ಎಂದು ಹೇಳುತ್ತಿದ್ದ ಯತೀಂದ್ರ, ರಾಜೀನಾಮೆ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾವೇರಿ ನಿವಾಸಕ್ಕೆ ಭೇಟಿ ನೀಡಿದರೂ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸದೆ ತೆರಳಿದರು.
ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು, ದೆಹಲಿ ಭೇಟಿಯ ವೇಳೆ ಯತೀಂದ್ರ ಕೂಡ ಜೊತೆಯಲ್ಲಿದ್ದರು. ಯತೀಂದ್ರಗೆ ಸಚಿವ ಸ್ಥಾನ ಅಥವಾ ಡಿಸಿಎಂ ಹುದ್ದೆ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಇಂದಿನ ಸಿಎಲ್‌ಪಿ ಸಭೆಯ ಬಳಿಕ ಹೊಸ ಸರ್ಕಾರದಲ್ಲಿ ಯಾರಿಗೆ ಯಾವ ಸ್ಥಾನ ಸಿಗಲಿದೆ ಎಂಬುದು ಸ್ಪಷ್ಟವಾಗುವ ಸಾಧ್ಯತೆ ಇದೆ.
ಸಿಎಂ ಹುದ್ದೆಯಿಂದ ನಿರ್ಗಮಿಸುವ ಮುನ್ನ ಕೊನೆಯದಾಗಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿದ್ದರಾಮಯ್ಯ, ರಾಜೀನಾಮೆ ಬಳಿಕವೂ ಕಾವೇರಿ ನಿವಾಸವನ್ನು ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿಯೇ ಉಳಿಸಿಕೊಂಡಿದ್ದಾರೆ.