ತಿರುವನಂತಪುರ: ಸಿಎಂಆರ್‌ಎಲ್ (CMRL) ಹಣಕಾಸು ಅಕ್ರಮ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ (ED), ಬುಧವಾರ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ನಿವಾಸ ಸೇರಿದಂತೆ ಹಲವು ಕಡೆ ದಾಳಿ ನಡೆಸಿದೆ. ಬೆಂಗಳೂರಿನಲ್ಲಿರುವ ಪುತ್ರಿ ಟಿ. ವೀಣಾ ಅವರ ಎಕ್ಸಾಲಾಜಿಕ್ ಸೊಲ್ಯೂಷನ್ಸ್ (Exalogic Solutions) ಕಂಪನಿ ಹಾಗೂ ನಿವಾಸ ಸೇರಿ ಮೂರು ಸ್ಥಳಗಳಲ್ಲಿ ಇ.ಡಿ ಶೋಧ ನಡೆಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತಿರುವನಂತಪುರದ ನಿವಾಸ ಸೇರಿದಂತೆ ಕೇರಳದ ಒಟ್ಟು 10 ಕಡೆಗಳಲ್ಲಿ ತಪಾಸಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಈಗಾಗಲೇ ಆಗ್ರಹಿಸಿತ್ತು.
ಏನಿದು ಪ್ರಕರಣ?
ಸಿಎಂಆರ್‌ಎಲ್ ಸಂಸ್ಥೆಯಿಂದ ಪಿಣರಾಯಿ ವಿಜಯನ್ ಪುತ್ರಿ ಟಿ. ವೀಣಾ ಅವರ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಕಂಪನಿಗೆ ರೂ.1.72 ಕೋಟಿ ಪಾವತಿ ಮಾಡಲಾಗಿದೆ ಎನ್ನುವ ಆರೋಪವೇ ಪ್ರಕರಣದ ಕೇಂದ್ರಬಿಂದು. 2018-19ರ ಅವಧಿಯಲ್ಲಿ ಯಾವುದೇ ಸೇವೆ ನೀಡದಿದ್ದರೂ ಕಂಪನಿಗೆ ಕೋಟ್ಯಂತರ ರೂಪಾಯಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಟಿ. ವೀಣಾ ಮಾಲೀಕತ್ವದ ಎಕ್ಸಾಲಾಜಿಕ್ ಕಂಪನಿಗೆ ಸಿಎಂಆರ್‌ಎಲ್‌ನಿಂದ ಪ್ರತಿಮಾಸ ಹಣ ಪಾವತಿಯಾಗುತ್ತಿದ್ದರೂ ಸೇವೆ ನೀಡಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ 2024ರಲ್ಲಿ ವಿಸ್ತೃತ ತನಿಖೆಗೆ ಆದೇಶಿಸಿತ್ತು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಕಂಪನಿಯ ಹಣಕಾಸು ವ್ಯವಹಾರಗಳ ಪರಿಶೀಲನೆಗೆ ಸೂಚನೆ ನೀಡಿದ್ದು, ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿ ತನಿಖೆಯ ಜವಾಬ್ದಾರಿ ವಹಿಸಿತ್ತು.
ಸಿಎಂಆರ್‌ಎಲ್ ಹಾಗೂ ಕೆಎಸ್‌ಐಡಿಸಿ ಸಂಸ್ಥೆಗಳಿಗೆ ಈ ಕುರಿತು ಮೊದಲೇ ನೋಟಿಸ್ ಜಾರಿಗೊಳಿಸಲಾಗಿತ್ತು. ಮಾಸಿಕ ಪಾವತಿ ವಿವಾದದ ಬಗ್ಗೆ ಸಿಎಂಆರ್‌ಎಲ್ ಸ್ಪಷ್ಟ ಉತ್ತರ ನೀಡದಿದ್ದರೆ, ಕೆಎಸ್‌ಐಡಿಸಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎನ್ನಲಾಗಿದೆ. ಬಳಿಕ ಎಕ್ಸಾಲಾಜಿಕ್, ಸಿಎಂಆರ್‌ಎಲ್ ಮತ್ತು ಕೆಎಸ್‌ಐಡಿಸಿ ಸಂಸ್ಥೆಗಳ ವಹಿವಾಟಿನ ಬಗ್ಗೆ ಆಳವಾದ ತನಿಖೆ ಆರಂಭಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇ.ಡಿ ತನಿಖೆ ಕೈಗೆತ್ತಿಕೊಂಡಿತ್ತು.
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಇ.ಡಿ ಕ್ರಮ:
ಇ.ಡಿ ತನಿಖೆ ರದ್ದುಪಡಿಸುವಂತೆ ಸಿಎಂಆರ್‌ಎಲ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಜಾಗೊಳಿಸಿತ್ತು. ನ್ಯಾಯಾಲಯದ ತೀರ್ಪಿನ ಬಳಿಕ ಪ್ರಕರಣದ ತನಿಖೆಗೆ ಮತ್ತಷ್ಟು ವೇಗ ಸಿಕ್ಕಿದ್ದು, ಇ.ಡಿ ಇದೀಗ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದೆ.