ಬೆಳಗಾವಿ: ಸಹಕಾರ ಸಂಘಗಳು ನೌಕರರ ಆರ್ಥಿಕ ಸುಭದ್ರತೆಗೆ ಮತ್ತು ಭವಿಷ್ಯದ ಬದುಕಿಗೆ ಸಹಕಾರಿಯಾಗುವುದರ ಜೊತೆಗೆ ವೈಯಕ್ತಿಕ ಯೋಜನೆ ರೂಪಿಸಲು ಸಹ ಸಹಾಯಕವಾಗುವವು. ಆ ನಿಟ್ಟಿನಲ್ಲಿ ಇಂತಹ ಪತ್ತಿನ ಸಂಘಗಳು ಪರಸ್ಪರ ಸಮನ್ವಯ ತತ್ವದ ಅಡಿಯಲ್ಲಿ ಕೆಲಸ ಮಾಡಿದಾಗ ಆರ್ಥಿಕ ಸುಭದ್ರತೆ ಸಾಧ್ಯ. ನಾವು ವೈಯಕ್ತಿಕ ಜೀವನದಲ್ಲೂ ಸಹ ವೈಯಕ್ತಿಕ ಬಜೆಟ್ ಆಧಾರಿತ ಖರ್ಚು ಮಾಡಿದಾಗ ಮಾತ್ರ ಜೀವನದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗದೆ ಸುಖಮಯ ಜೀವನ ಸಾಗಿಸಬಹುದು. ಎಂದು ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ ಹೇಳಿದರು.
ಬೆಳಗಾವಿಯ ಮಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಭಾನುವಾರ ಬೆಳಗಾವಿ ತಾಲೂಕು ಪ್ರೌಢಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ 11 ನೇ ವಾರ್ಷಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಇರ್ಫಾನ ಮಹಾತ ಮಾತನಾಡಿ, ಕಳೆದ 10 ವರ್ಷಗಳಿಂದ ಹಂತ ಹಂತವಾಗಿ ಸಂಘದ ಸದಸ್ಯರ ಸಹಕಾರದಿಂದ ಸಂಘ ಆರ್ಥಿಕವಾಗಿ ಸುಭದ್ರವಾಗುತ್ತಾ ಸಾಗಿದೆ. ₹15ಲಕ್ಷ ಮೂಲ ಬಂಡವಾಳದೊಂದಿಗೆ 190 ಸದಸ್ಯರೊಂದಿಗೆ ಆರಂಭವಾದ ಸಂಘ 11 ವರ್ಷದ ಕೊನೆಯಲ್ಲಿ 310 ಸದಸ್ಯರೊಂದಿಗೆ ₹ 2.7 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು ಪ್ರಸ್ತುತ ವರ್ಷ ₹ 29 ಲಕ್ಷ ಲಾಭಾಂಶ ಗಳಿಸಿದ್ದು ಇದರಲ್ಲಿ 5% ಭಾಗವನ್ನು ಸದಸ್ಯರಿಗೆ ಡಿವಿಡೆಂಡ್ ರೂಪದಲ್ಲಿ ಕೊಡುವುದರ ಜೊತೆಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ನಗದು ರೂಪದಲ್ಲಿ ಪ್ರತಿಭಾ ಪುರಸ್ಕಾರ ಸೇರಿದಂತೆ ವರ್ಷವಿಡಿ ವಿವಿಧ ಶೈಕ್ಷಣಿಕ, ಸಾಮಾಜಿಕ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಧನಸಹಾಯದ ಜೊತೆಗೆ ಸಹಕಾರ ನೀಡುತ್ತಿದೆ ಎಂದರು.
ಸದಸ್ಯರ ಸಾಲದ ಮೇಲೆ ಈಗಿರುವ 8.25% ಬಡ್ಡಿ ದರವನ್ನು ಮುಂಬರುವ ದಿನಗಳಲ್ಲಿ ಸದಸ್ಯರ ಸಹಕಾರದೊಂದಿಗೆ ಇಳಿಕೆ ಮಾಡುವ ಯೋಚನೆ ಇದೆ. ಸಂಘಕ್ಕೆ ಒಂದು ಸ್ವಂತ ಕಟ್ಟಡ ಮಾಡುವ ಯೋಜನೆ ಸಹ ಇದ್ದು ಆ ನಿಟ್ಟಿನಲ್ಲಿ ಸದಸ್ಯರು ಸಹ ಸಹಕರಿಸಬೇಕು ಎಂದು ಸಂಘದ ಕಾರ್ಯ ಪ್ರಗತಿಯ ಬಗ್ಗೆ ವಿವರಿಸಿದರು .
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿಶೇಷ ಸಾಧನೆ ಮಾಡಿದ 15 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಈ ವರ್ಷ ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಾದ ಮಹೇಶ್ ಅಕ್ಕಿ,ದಶರಥ ನಾಯಿಕ, ಎಂ ಎಸ್. ಕಿಲ್ಲೇದಾರ ಮತ್ತು ರಮೇಶ ಕಾಂಬಳೆ , ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿ ಗ್ರಾಮೀಣ ಬಿ ಇ ಓ ಪುಂಡಲಿಕ ಚೌಹಾನ್, ನಗರ ವಲಯದ ಬಿಇಓ ರವಿ ಭಜಂತ್ರಿ, ಬಿ ಆರ್ ಸಿ ದಾನಮ್ಮ ಜಳಕಿ, ಐ ಡಿ ಹಿರೇಮಠ, ರವಿ ಜವಳೇಕರ, ಶಶಿಕಲಾ ಹೊಸೂರ,ಪ್ರವೀಣ ಪಾಟೀಲ ಶಶಿಧರ ಗುಂಡ್ಲುರ,ಅಶೋಕ ಖೋತ,ರಾಜೇಶ ಕೊತೇಕರ, ಎಂ. ಎಸ್. ಸುಬ್ಬಾಪುರಮಠ, ಪ್ರವೀಣ ಹೊಸೂರ ಸೇರಿದಂತೆ ಸಂಘದ ನಿರ್ದೇಶಕರು ಸರ್ವ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಎಂ. ಬಿ. ದೊಡವಾಡ ಸ್ವಾಗತಿಸಿದರು. ಎಂ ಎಸ್ ಮೇದಾರ ಪ್ರಾಸ್ತಾವಿಕ ನುಡಿಗಳನ್ನು ಆಡಿದರು . ವಾಣಿಶ್ರೀ ಜೋಗಳೆಕರ ನಿರೂಪಿಸಿದರು. ಮಾಲಾ ಬುಳ್ಳಾ ವಂದಿಸಿದರು.