ರಾಜ್ಯದಲ್ಲಿ ಕಾನೂನು ಮತ್ತು ಶಾಂತಿ ಕಾಪಾಡಬೇಕಾದ ಪೊಲೀಸರೇ ಕಳ್ಳತನ ಹಾಗೂ ದರೋಡೆಗಳಲ್ಲಿ ಭಾಗಿಯಾಗಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ. 11 ಲಕ್ಷ ರೂ. ಕದ್ದ ಹೆಡ್ ಕಾನ್ಸ್‌ಟೇಬಲ್, ಎಟಿಎಂ ದರೋಡೆಗೆ ಸಂಬಂಧಿಸಿದ ಕಾನ್ಸ್‌ಟೇಬಲ್, ಚಿನ್ನದ ವ್ಯಾಪಾರಿಯನ್ನು ದೋಚಿದ ಪಿಎಸ್‌ಐ—ಈ ಎಲ್ಲ ಘಟನೆಗಳು ಒಂದೊಂದಾಗಿ ಹೊರಬರುತ್ತಿರುವುದರಿಂದ ಇಲಾಖೆಯ ವಿಶ್ವಾಸಾರ್ಹತೆಗೆ ಭಾರಿ ಹೊಡೆತ ಬಿದ್ದಿದೆ. ಜನಗಳಲ್ಲಿ ಅಸುರಕ್ಷಿತ ಭಾವನೆ ಹೆಚ್ಚಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆಯ ಪರಿಣಾಮಕಾರಿ ಕಾರ್ಯಾಚರಣೆ ಕುರಿತು ಆಳವಾದ ಪ್ರಶ್ನೆಗಳು ಉದ್ಭವಿಸಿವೆ.
ಬೆಂಗಳೂರು, ಡಿಸೆಂಬರ್ 4: ಅಪರಾಧವನ್ನು ತಡೆಯಬೇಕಾದ ಪೊಲೀಸರೇ ತಪ್ಪಿನ ದಾರಿಗೆ ಜಾರಿದರೆ, ಕಾನೂನು ವ್ಯವಸ್ಥೆಯ ಮೇಲೆ ಜನರು ನಂಬಿಕೆ ಇಡುವುದು ಹೇಗೆ? “ಬೇಲಿ ಹೊಲ ಮೇಯುವುದು” ಎಂಬಂತೆ ಕೆಲವು ಪೊಲೀಸರ ನಡೆ ಇಡೀ ಇಲಾಖೆಗೆ ಕಪ್ಪು ಮಸಿ ಹಚ್ಚುತ್ತಿದೆ. ಕಳ್ಳರೊಂದಿಗೆ ಜತೆಯಾಗಿ ಕೆಲಸ ಮಾಡಿರುವ ಘಟನೆಗಳು ಮತ್ತೆ ಮತ್ತೆ ಹೊರಬರುತ್ತಿದ್ದು, ರಾಜ್ಯದ ನಾಗರಿಕರಲ್ಲಿ ಆತಂಕ ಹೆಚ್ಚಿಸುತ್ತಿವೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನದಿಂದ 7.11 ಕೋಟಿ ರೂ. ದೋಚಿದ ಪ್ರಕರಣದಲ್ಲಿ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಹೆಸರಾಗಿದೆ. ಇದಾದ ಕೆಲವೇ ದಿನಗಳಲ್ಲಿ ದಾವಣಗೆರೆಯಲ್ಲಿ ಇಬ್ಬರು ಪಿಎಸ್‌ಐ ಸೇರಿ ನಾಲ್ವರು ಪೊಲೀಸರು ಚಿನ್ನದ ವ್ಯಾಪಾರಿಯಿಂದ ಹಣ ದೋಚಿ ಬಂಧಿತರಾಗಿರುವ ಘಟನೆ ವರದಿಯಾಯಿತು.
ಈಗ ಬೆಂಗಳೂರಿನಲ್ಲಿ ಮತ್ತೊಂದು ಅವಮಾನಕಾರಿ ಘಟನೆ ಬಯಲಾಗಿದ್ದು, ಸೈಬರ್ ವಂಚನೆ ಪ್ರಕರಣದಲ್ಲಿ ಬಂಧಿಸಿದ್ದ ವ್ಯಕ್ತಿಯನ್ನು ವಿಚಾರಣೆಗೆ ಕಮಿಷನರ್ ಕಚೇರಿಗೆ ತರಲಾಗಿದ್ದಾಗ, ಆರೋಪಿಯ ಕಾರಿನಲ್ಲಿದ್ದ 11 ಲಕ್ಷ ರೂ. ಹಣವನ್ನು ಪೊಲೀಸ್ ಸಿಬ್ಬಂದಿಯೇ ಕದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಂಧನದ ವೇಳೆ ಕಾರಿನೊಳಗೆ ಇಟ್ಟಿದ್ದ ಹಣವನ್ನು ಹೆಡ್ ಕಾನ್ಸ್‌ಟೇಬಲ್ ಜಬಿವುಲ್ಲಾ ಎತ್ತಿಕೊಂಡು ಹೋಗಿರುವುದು ದೃಶ್ಯಾವಳಿಯಿಂದ ದೃಢಪಟ್ಟಿದೆ.
ಹಿರಿಯ ಅಧಿಕಾರಿಗಳ ಮುಂದೆ ನಾಟಕ:
ಕಾರಿನಲ್ಲಿ ಇದ್ದ ಹಣವನ್ನು ಕದ್ದ ನಂತರ ಜಬಿವುಲ್ಲಾ ತಾನೇನೂ ತಿಳಿದಿಲ್ಲ ಎಂಬಂತೆ ವರ್ತಿಸಿದರೂ, ಆ ನಂತರ ಆರೋಪಿಯು ಜಾಮೀನಿನ ಮೇಲೆ ಹೊರಬಂದಾಗ ಹಣದ ಚೀಲ ಕಾಣೆಯಾಗಿರುವುದನ್ನು ಪ್ರಶ್ನಿಸಿದಾಗ ಅಧಿಕಾರಿಗಳು ಶಂಕಿತರಾದರು. ಸಿಸಿಟಿವಿ ಪರಿಶೀಲಿಸಿದಾಗ ಜಬಿವುಲ್ಲಾ ಹಣದ ಬ್ಯಾಗ್ ತೆಗೆದುಕೊಂಡು ಹೋಗಿರುವುದು ಸ್ಪಷ್ಟವಾಗಿ ಪತ್ತೆಯಾಯಿತು.
ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸಿಂ ಜಬಿವುಲ್ಲಾ ಅವರ ಮನೆಯನ್ನು ಶೋಧಿಸಿದಾಗ, ಅವರು ಮೊದಲಿಗೆ ನಾಟಕ ಮಾಡಿದರೂ, ಹಾಸಿಗೆಯ ಕೆಳಗೆ ಹಣ ಮರೆಮಾಡಿರುವುದು ಪತ್ತೆಯಾಯಿತು. ಆದರೆ ಅಲ್ಲಿದ್ದದ್ದು ಕೇವಲ 2 ಲಕ್ಷ ರೂ. ಮಾತ್ರ. ಮಿಕ್ಕ ಹಣವನ್ನು ತಮ್ಮ ಪತ್ನಿಗೆ ಆಭರಣ ತಯಾರಿಸಲು ಬಳಸಿರುವುದಾಗಿ ತನಿಖೆಯಲ್ಲಿ ಹೊರಬಂದಿದೆ. ಅವರು ಈಗ 2 ಲಕ್ಷ ರೂ. ಹಿಂತಿರುಗಿಸಿದ್ದಾರೆ ಮತ್ತು ಉಳಿದ ಹಣವನ್ನು ಕೂಡ ತಕ್ಷಣ ನೀಡುವಂತೆ ಸೂಚನೆ ನೀಡಲಾಗಿದೆ. ಈ ಬೆಳವಣಿಗೆಯನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ.