ತಾಳಿಕೋಟೆ, ತಾಲೂಕಿನ ಕೊಣ್ಣೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ರಾಮನಗೌಡ ನೀ. ನೀರಲಗಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಮನಗೌಡ ನೀರಲಗಿ, ಸದಸ್ಯರು ಹಾಗೂ ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುವ ಮೂಲಕ ಸಂಘವನ್ನು ಮತ್ತಷ್ಟು ಬಲಪಡಿಸಲಾಗುವುದು. ಸದಸ್ಯರ ಸಹಕಾರ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಒಗ್ಗಟ್ಟಿನ ಕಾರ್ಯದಿಂದ ಸಂಘವು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಿದೆ ಎಂದು ಹೇಳಿದರು.
ಸಂಘವು ಹಲವು ವರ್ಷಗಳಿಂದ ರೈತರು ಹಾಗೂ ಸದಸ್ಯರಿಗೆ ವಿವಿಧ ಸಹಕಾರ ಸೇವೆಗಳನ್ನು ಒದಗಿಸುತ್ತಿದ್ದು, ಸಭೆಯಲ್ಲಿ ಹಿಂದಿನ ಸಾಲಿನ ಸಂಘದ ಕಾರ್ಯಚಟುವಟಿಕೆಗಳು, ಹಣಕಾಸಿನ ವ್ಯವಹಾರಗಳು ಹಾಗೂ ಸದಸ್ಯರಿಗೆ ನೀಡಲಾಗುತ್ತಿರುವ ವಿವಿಧ ಸೌಲಭ್ಯಗಳ ಕುರಿತು ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ರೈತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಗಂಗಣ್ಣ ಪತ್ತಾರ, ಗೌಡಪ್ಪಗೌಡ ಅಸ್ಕಿ, ಅಶೋಕ ಯಾಳವಾರ, ಮಂಜುಳಾ ಇಂಗಳಗಿ, ಶಾಂತಮ್ಮ ಹರಿಜನ, ಗೋಪಾಲ ಕೂಡಗಿ, ಮಿಣಜಗಿ ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಅಂಗಡಗೇರಿ, ಚಿದಾನಂದ ಕೇಸರಭಾವಿ, ಹಜರತ್ ಮುಸಾ ಆವಟಿ, ಮರೆಪ್ಪ ಬಿ.ಜಿ. ಪಡಸಲಗಿ, ರಾಮನಗೌಡ ಹಂದ್ರಾಳ, ವಿವೇಕಾನಂದ ದ್ಯಾಪುರ, ಚಂದ್ರಶೇಖರ ಪೊಲೀಸ್ ಪಾಟೀಲ, ಬಾಪೂಗೌಡ ದ್ಯಾಪುರ, ಮಹಾಂತಗೌಡ ಸೇರಿದಂತೆ ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ರೈತ ಸದಸ್ಯರು ಉಪಸ್ಥಿತರಿದ್ದರು.