ತಾಳಿಕೋಟೆ,ಸೆ,೨೮ : ಇಂದಿನ ಆಧುನಿಕ ಜೀವನಶೈಲಿಯಲ್ಲಿ ವಿವಾಹ ಕಾರ್ಯಕ್ರಮಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಮಧ್ಯಮ ಹಾಗೂ ಬಡ ಕುಟುಂಬಗಳು ಮದುವೆಯ ಖರ್ಚಿಗಾಗಿ ಸಾಲದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಳ, ಸಾತ್ವಿಕ ಹಾಗೂ ವೆಚ್ಚರಹಿತ ವಿವಾಹಗಳಿಗೆ ಉತ್ತೇಜನ ನೀಡುವುದರ ಜೊತೆಗೆ, ವಧು-ವರರಿಗೆ ಸೂಕ್ತ ಸಂಗಾತಿಯನ್ನು ಪರಿಚಯಿಸುವ ಉದ್ದೇಶದಿಂದ ಶ್ರೀ ಭಗೀರಥ ಸರ್ವ ಧರ್ಮ ವಧು-ವರರ ಮಾಹಿತಿ ವಧು-ವರರ ಪಾಲಕರ ಪರಿಚಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವದು ಶ್ಲಾಘನೀಯವಾಗಿದೆ ಎಂದು ನಿವೃತ್ತ ಶಿಕ್ಷಕ ಸಿ.ಎಂ.ಹಿರೇಮಠ ಹೇಳಿದರು.
ರವಿವಾರರಂದು ಪಟ್ಟಣದ ಬಾಲಾಜಿ ಸಭಾ ಭವನದಲ್ಲಿ ಶ್ರೀ ಭಗೀರಥ ಸರ್ವಧರ್ಮ ವಧು-ವರರ ಉಚಿತ ಮಾಹಿತಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ಸರ್ವಧರ್ಮ ವಧು-ವರರ ಹಾಗೂ ಪಾಲಕರ ಪರಿಚಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ವಿವಿಧ ಸಮುದಾಯಗಳ ವಧು-ವರರ ಕುಟುಂಬಗಳಿಗೆ ಪರಸ್ಪರ ಪರಿಚಯವಾಗಲು ಅವಕಾಶ ಕಲ್ಪಿಸಲಾಗುತ್ತಿದೆ. ವಧು-ವರರ ಬಯೋಡೇಟಾ, ಭಾವಚಿತ್ರ ಹಾಗೂ ಅಗತ್ಯ ಮಾಹಿತಿಯನ್ನು ನೋಂದಾಯಿಸಿಕೊಂಡು, ಸಂಬಂಧಿಸಿದ ಕುಟುಂಬಗಳು ಪರಸ್ಪರ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಈ ವೇದಿಕೆ ಸಹಕಾರಿಯಾಗಲಿದೆ ಎಂದು ತಿಳಿಸಿದ ಅವರು ವರದಕ್ಷಿಣೆ ಪಿಡುಗಿನಿಂದಾಗಿ ಸಮಾಜದಲ್ಲಿ ಮದುವೆಗಳು ಕಷ್ಟ ಕಾರ್ಯಗಳಾಗಿವೆ. ಇದರಿಂದ ಬಡ ಮಧ್ಯಮ ವರ್ಗದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಮದುವೆಗಳು ಸರಳವಾಗಿ ನೆರವೇರುವಂತಾಗಲು ಇಂತಹ ವೇದಿಕೆಗಳು ತುಂಬಾ ಸಹಕಾರಿಯಾಗುತ್ತವೆ. ಇದರ ಜೊತೆಗೆ ಇಂತಹ ವೇದಿಕೆಗಳ ಮುಖಾಂತರ ಸಾಮೂಹಿಕ ಹಾಗೂ ಅಂತರ್ಜಾತಿ ವಿವಾಹಗಳನ್ನೂ ಹಮ್ಮಿಕೊಳ್ಳಬೇಕು ಎಂದು ತಿಳಿಸಿ ದಿ.ಸುಭಾಸ ಯರಕ್ಯಾಳ ಅವರು ಕಳೆದ ೩೦ ವರ್ಷಗಳ ಹಿಂದೆ ಆರಂಭಿಸಿದ ಈ ಕೇಂದ್ರವನ್ನು ಅವರ ಚಿರಂಜೀವಿ ಸುನೀಲಕುಮಾರ ಯರಕ್ಯಾಳ ಅವರು ಬಹಳ ನಿಷ್ಠೆಯಿಂದ ನಡೆಸಿಕೊಂಡು ಹೋಗುತ್ತಿದ್ದಾರೆ ಅವರಿಗೆ ನಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದರು.
ವೇದಮೂರ್ತಿ ಮಲ್ಲಯ್ಯ ಹಿರೇಮಠ ಹಾಗೂ ಪಂಚಾಕ್ಷರಿ ಹಿರೇಮಠ ಅವರು ಮಾತನಾಡಿ ಸಂಬಂಧಗಳನ್ನು ಜೋಡಿಸುವುದು ಪುಣ್ಯದ ಕಾರ್ಯವಾಗಿದೆ ಇವತ್ತು ಪ್ರತಿಯೊಬ್ಬರೂ ನೌಕರಸ್ಥ ವರನನ್ನೇ ಆಯ್ಕೆ ಮಾಡಲು ಬಯಸುತ್ತಾರೆ ಇದು ಸರಿಯಲ್ಲ. ಸಣ್ಣ ಪುಟ್ಟ ಕೆಲಸ ಮಾಡುವ ಸಂಸ್ಕಾರಯುತ ಯುವಕರನ್ನೂ ಆಯ್ಕೆ ಮಾಡಬೇಕು. ಇವತ್ತು ನಮಗೆಲ್ಲರಿಗೂ ಅನ್ನ ನೀಡುವ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ ಇದು ನಿಜಕ್ಕೂ ನೋವಿನ ಸಂಗತಿಯಾಗಿದೆ ಸುನಿಲ್ ಯರಕ್ಯಾಳ ಅವರು ವಧು-ವರರ ಮಾಹಿತಿ ಕೇಂದ್ರದ ಮೂಲಕ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ ಅವರಿಗೆ ಎಲ್ಲರೂ ಬೆಂಬಲವಾಗಿ ನಿಲ್ಲೋಣ ಎಂದರು.
ಅಧ್ಯಕ್ಷತೆ ವಹಿಸಿದ ವೇ.ಮೂ. ಸಿದ್ದಯ್ಯ ಸ್ವಾಮಿ ಮರೋಳ ಅವರು ಮಾತನಾಡಿ ಮದುವೆ ಎನ್ನುವುದು ಜೀವನದ ಮಹತ್ವದ ಘಟ್ಟವಾದರೂ, ಅದಕ್ಕಾಗಿ ಕುಟುಂಬಗಳು ತಮ್ಮ ಆರ್ಥಿಕ ಸಾಮರ್ಥ್ಯ ಮೀರಿ ಖರ್ಚು ಮಾಡುವುದು ಸರಿಯಲ್ಲ. ಅದ್ಧೂರಿ ಮದುವೆ, ಅನಗತ್ಯ ಸಮಾರಂಭಗಳು ಹಾಗೂ ದುಬಾರಿ ವ್ಯವಸ್ಥೆಗಳಿಂದ ಸಾಲದ ಹೊರೆ ಹೆಚ್ಚಿಸಿಕೊಳ್ಳುವ ಬದಲು, ಸರಳವಾಗಿ ವಿವಾಹ ನೆರವೇರಿಸಿ ಉಳಿದ ಹಣವನ್ನು ಮಕ್ಕಳ ಭವಿಷ್ಯ, ಶಿಕ್ಷಣ, ಮನೆ ನಿರ್ಮಾಣ ಅಥವಾ ಉದ್ಯೋಗಕ್ಕೆ ಬಳಸಿಕೊಳ್ಳುವುದು ಸೂಕ್ತ ಎಂದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಖಾಸ್ಗತೇಶ್ವರ ಹಾಗೂ ವಿರಕ್ತಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗಣ್ಯರಾದ ಕಾಶಿರಾಯಗೌಡ ದೇಸಾಯಿ (ಶಳ್ಳಗಿ), ಶ್ರೀ ಭಗೀರಥ ವಧು ವರರ ಕೇಂದ್ರದ ಗೌರವ ಅಧ್ಯಕ್ಷ ಬಸಯ್ಯ ಹಿರೇಮಠ, ಮಾದೇವಿ ಸುಭಾಸ ಯರಕ್ಯಾಳ, ಕಾರ್ಯದರ್ಶಿ ಸುನೀಲ ಯರಕ್ಯಾಳ, ಶರಣಗೌಡ ಪೊಲೀಸ್‌ಪಾಟೀಲ, ಭರತ್ ಅಗರವಾಲ, ವಿಕ್ರಮ್ ಅಗರವಾಲ, ಅಧ್ಯಕ್ಷ ಶಿವಾಜಿ ಯಡ್ರಾಮಿ, ಶರಣಗೌಡ ಪಾಟೀಲ(ಕರಿಭಾವಿ), ಖಜಾಂಚಿ ವೀರಭದ್ರ ಗಣಾಚಾರಿ, ಸಂಚಾಲಕ ಪೀರ ಮೊಹಮ್ಮದ್ ಖಾಜಿ, ಮೊಹಮ್ಮದ್ ಶಫೀಕ ಇನಾಮದಾರ, ಕಚೇರಿ ಸಹಾಯಕರಾದ ಪ್ರಕಾಶ ಬಬಲೇಶ್ವರ, ಪಾಂಡು ನನ್ನವರೆ, ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಧು ವರರ ಪಾಲಕರು ಉಪಸ್ಥಿತರಿದ್ದರು.