ಬೆಂಗಳೂರು: ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮೃತ ಮಹಿಳೆಯರ ಬೆತ್ತಲೆ ಫೋಟೋಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ರಾಜ್ಯ ಮಹಿಳಾ ಆಯೋಗ (Karnataka Women’s Commission) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆಯೋಗ, ಸಂಪೂರ್ಣ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆಯ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದೆ.
ಬೀದರ್ ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಅಟೆಂಡರ್ ಮುನೀರ್ ಅಹಮದ್ ಎಂಬಾತ ಮೃತ ಮಹಿಳೆಯರ ಶವಗಳ ಫೋಟೋಗಳನ್ನು ಅನುಮತಿ ಇಲ್ಲದೇ ಕ್ಲಿಕ್ಕಿಸಿ ವಿಕೃತಿ ಮೆರೆದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಆಯೋಗ, ನಿಯಮಾನುಸಾರ ತನಿಖೆ ನಡೆಸಿ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದೆ ಎಂದು ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏನಿದು ಘಟನೆ?
ಬ್ರಿಮ್ಸ್ ಆಸ್ಪತ್ರೆಯ ಶವಾಗಾರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಟೆಂಡರ್ ಮುನೀರ್ ಅಹಮದ್ ಮೃತ ಮಹಿಳೆಯರ ಶವಗಳ ಮೇಲಿನ ಬಟ್ಟೆಗಳನ್ನು ತೆಗೆದು ಮೊಬೈಲ್‌ನಲ್ಲಿ ಬೆತ್ತಲೆ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಪಿಎಂಇ ಪ್ರಕ್ರಿಯೆ ನಡೆಯುವ ವೇಳೆ ಯಾವುದೇ ಅನುಮತಿ ಇಲ್ಲದೇ ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕ್ಲಿಕ್ಕಿಸಿದ ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿಕೊಂಡಿದ್ದಾನೆ ಎನ್ನಲಾಗಿದೆ.
ಈ ಘಟನೆ ಮಹಿಳೆಯರ ಘನತೆ, ಕುಟುಂಬಸ್ಥರ ಮಾನಸಿಕ ಸ್ಥಿತಿ ಹಾಗೂ ವೈದ್ಯಕೀಯ ಗೌಪ್ಯತೆಗೆ ಧಕ್ಕೆಯುಂಟು ಮಾಡಿದೆ. ಪ್ರಕರಣ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 301 ಹಾಗೂ 62 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.