ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಗೆ ಅಂತಿಮ ತೆರೆ ಬೀಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಂದು ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ. ನಾಯಕತ್ವ ಬದಲಾವಣೆ ಕುರಿತ ಗೊಂದಲಕ್ಕೆ ಸ್ಪಷ್ಟನೆ ನೀಡಲು ಸಿಎಂ ಹಾಗೂ ಡಿಸಿಎಂ ಜೊತೆ ಪ್ರತ್ಯೇಕ ಸಭೆಗಳನ್ನು ನಡೆಸಲು ಹೈಕಮಾಂಡ್ ವೇಳಾಪಟ್ಟಿ ರೂಪಿಸಿದೆ.
ಇಂದು ಬೆಳಗ್ಗೆ 11 ಗಂಟೆಯ ನಂತರ ಇಂದಿರಾ ಭವನದಲ್ಲಿ ಮೊದಲು Siddaramaiah ಅವರೊಂದಿಗೆ ಹೈಕಮಾಂಡ್ ನಾಯಕರು ಚರ್ಚೆ ನಡೆಸಲಿದ್ದಾರೆ. ಬಳಿಕ ಡಿಸಿಎಂ DK Shivakumar ಅವರೊಂದಿಗೆ ಮಾತುಕತೆ ನಡೆಯಲಿದೆ. ಈ ಸಭೆಯಲ್ಲಿ ಕೇವಲ ಸಂಪುಟ ಪುನಾರಚನೆ ಬಗ್ಗೆ ಮಾತ್ರ ಚರ್ಚೆಯಾಗುತ್ತದೆಯೇ ಅಥವಾ ಮುಖ್ಯಮಂತ್ರಿ ಬದಲಾವಣೆಗೂ ಸಂಬಂಧಿಸಿದ ನಿರ್ಧಾರ ಕೈಗೊಳ್ಳಲಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ಮೂಲಗಳ ಪ್ರಕಾರ, ಇಂದು ಮೂರು ಹಂತಗಳಲ್ಲಿ ಸಭೆಗಳು ನಡೆಯುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕ ಚರ್ಚೆ, ಎರಡನೇ ಹಂತದಲ್ಲಿ ಡಿಕೆ ಶಿವಕುಮಾರ್ ಜೊತೆ ಮಾತುಕತೆ, ಅಂತಿಮವಾಗಿ ಇಬ್ಬರು ನಾಯಕರನ್ನೂ ಒಟ್ಟಿಗೆ ಕೂರಿಸಿ ಸಮನ್ವಯ ಸಭೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ದೆಹಲಿ ಪ್ರವಾಸದಲ್ಲೂ ಡಿಕೆ ಶಿವಕುಮಾರ್ ತಮ್ಮದೇ ಪ್ರತ್ಯೇಕ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ತೆರಳಿದ ಬಳಿಕ ಅವರು ಕರ್ನಾಟಕ ಭವನಕ್ಕೆ ಭೇಟಿ ನೀಡದೇ, ದೆಹಲಿಯ ಖಾಸಗಿ ನಿವಾಸದಲ್ಲೇ ತಂಗಿದ್ದು, ಸಹೋದರ DK Suresh ಅವರೊಂದಿಗೆ ಮುಂದಿನ ರಾಜಕೀಯ ನಡೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಸಭೆ ಸಮೀಪಿಸುತ್ತಿದ್ದಂತೆ ಡಿಕೆ ಶಿವಕುಮಾರ್ ಮೇಲೆ ಒತ್ತಡ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಆಪ್ತ ಮೂಲಗಳ ಪ್ರಕಾರ, ಅವರು ಬೆಳಗಿನ ಜಾವದವರೆಗೂ ನಿದ್ರೆ ಮಾಡದೇ ಸಹೋದರ ಡಿಕೆ ಸುರೇಶ್ ಜೊತೆ ಸುದೀರ್ಘ ಚರ್ಚೆಯಲ್ಲಿ ನಿರತರಾಗಿದ್ದರು.
ಇದೇ ವೇಳೆ, ದೆಹಲಿಯಲ್ಲಿ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ‘ಪ್ರಾರ್ಥನೆಗೆ ಫಲ ಸಿಗುತ್ತಾ?’ ಎಂಬ ಮಾಧ್ಯಮದ ಪ್ರಶ್ನೆಗೆ ನಗುಮುಖದಲ್ಲೇ ಉತ್ತರಿಸದೇ ಮುಂದೆ ಸಾಗಿದರು.