ಬಾಗಲಕೋಟೆ : ಅಕ್ಟೋಬರ ೦೯ : ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ರಾಜ್ಯ ಮಟ್ಟದ ಜೂಡೋ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಶುಕ್ರವಾರ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಪ್ರಸಕ್ತ ಸಾಲಿನ ೧೪/೧೭ ವಯೋಮಿತಿಯೊಳಗಿನ ರಾಜ್ಯ ಮಟ್ಟದ ಜೂಡೋ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಮುಖ್ಯವಾಗಿದ್ದು, ಸೋಲು-ಗೆಲುವು ನಂತರದ ವಿಚಾರವಾಗಿದೆ. ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜತೆಗೆ ಅನುಭವವನ್ನು ಪಡೆದುಕೊಳ್ಳಬೇಕು ಎಂದರು.
ಗೆಲುವೊಂದೇ ಕ್ರೀಡೆಯ ಅಂತಿಮ ಗುರಿಯಾಗಬಾರದು. ಸ್ಪರ್ಧೆಗಳಲ್ಲಿ ಭಾಗವಹಿಸುವುದು, ತಮ್ಮ ಸಾಮರ್ಥ್ಯವನು ಗುರುತಿಸಿಕೊಳ್ಳುವುದು ಹಾಗೂ ನಿರಂತರ ಅಭ್ಯಾಸದ ಮೂಲಕ ಕೌಶಲವನ್ನು ವೃದ್ದಿಡಿಕೊಳ್ಳುವುದು ಮುಖ್ಯ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಮುಂದಿನ ಹಂತಕ್ಕೆ ಆಯ್ಕೆಯಾಗಬೇಕು. ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಹಾರೈಸಿದರು.
ಕ್ರೀಡೆಯು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ ಹಾಗೂ ಸೋಲನ್ನು ಸ್ವೀಕರಿಸಿ ಮತ್ತೆ ಪ್ರಯತ್ನಿಸುವ ಮನೋಭಾವವನ್ನು ಬೆಳೆಸುತ್ತದೆ. ಹೀಗಾಗಿ ಕ್ರೀಡಾಪಟುಗಳು ಪಂದ್ಯಾವಳಿಯನ್ನು ಕೇವಲ ಸ್ಪರ್ಧೆಯಾಗಿ ಪರಿಗಣಿಸದೆ, ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶವಾಗಿ ಬಳಸಿಕೊಳ್ಳಲು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಮಾತನಾಡಿ, ಸ್ಪರ್ಧಾಳುಗಳು ಕ್ರೀಡಾ ಮನೋಭಾವದಿಂದ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು. ಗೆಲುವಿನ ಜತೆಗೆ ಎದುರಾಳಿಗಳನ್ನು ಗೌರವಿಸುವುದು ಹಾಗೂ ಕ್ರೀಡಾ ನಿಯಮಗಳನ್ನು ಪಾಲಿಸುವುದು ಮುಖ್ಯ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಸಿ.ಸೀತಾರಾಮು ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯ ಮಟ್ಟದ ಜೂಡೋ ಪಂದ್ಯಾವಳಿ ಆಯೋಜನೆ ಈ ವರ್ಷ ಬಾಗಲಕೋಟೆ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ರಾಜ್ಯದ ೨೮ ಜಿಲ್ಲೆಯ ಒಟ್ಟು ೭೦೦ ಕ್ರೀಡಾಪಟುಗಳು ಭಾಗವಹಿಸಲು ಆಗಮಿಸಿದ್ದಾರೆ. ೩೫೦ ಬಾಲಕರು ಹಾಗೂ ೩೫೦ ಬಾಲಕಿಯರು ಪಾಲ್ಗೊಂಡಿದ್ದು, ಪ್ರಾಥಮಿಕ ವಿಭಾಗದಲ್ಲಿ ೭ ಜನ ಬಾಲಕ, ೭ ಜನ ಬಾಲಕಿ ಸೇರಿ ಒಟ್ಟು ೧೪ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಅದೇ ರೀತಿಯ ಪ್ರೌಢಶಾಲಾ ವಿಭಾಗದಲ್ಲಿ ೯ ಜನ ಬಾಲಕಿಯರು, ೧೦ ಜನ ಬಾಲಕರು ಆಯ್ಕೆಯಾಗಿ ಇದೇ ತಿಂಗಳು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಜೂಡೋ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಲ್.ಕೆ.ತೋರಣಗಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಆರ್.ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.