ಬಳ್ಳಾರಿ,ಅ,೦೬ ವಿದ್ಯುತ್ ಖಾಸಗಿಕರಣ ವಿರೋಧಿಸಿ ಅಕ್ಟೋಬರ್ 8 ರಂದು ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ನಡೆಯುತ್ತಿರುವ ಜಿಲ್ಲಾ ಸಮಾವೇಶದ ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಸಂಚಾಲಕರಾದ ಆರ್. ಸೋಮಶೇಖರ್ ಗೌಡ ಅವರು ಮಾತನಾಡುತ್ತಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿನದಿಂದ ದಿನಕ್ಕೆ ವಿದ್ಯುತ್ ಅನ್ನು ಸಂಪೂರ್ಣವಾಗಿ ಖಾಸಗಿ ಅವರಿಗೆ ಒಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ. ಇದಾದಲ್ಲಿ, ಇನ್ನು ಮುಂದೆ ವಿದ್ಯುತ್ ಸಂಪೂರ್ಣವಾಗಿ ಉಳ್ಳವರ ಪಾಲಾಗುತ್ತದೆ. ಸಾಮಾನ್ಯ ಗ್ರಾಹಕರು, ರೈತರು, ಶ್ರಮಜೀವಿಗಳು ವಿದ್ಯುತ್ ಗಾಗಿ ಅಪಾರ ಹಣ ವ್ಯಹಿಸಬೇಕಾದ ಸಂದರ್ಭ ಬರುತ್ತದೆ. ಇದರಿಂದಾಗಿ ಎಲ್ಲಾ ದುಡಿಯುವ ಜನರ ಬದುಕು ಸಂಪೂರ್ಣವಾಗಿ ಕತ್ತಲಾಗುತ್ತದೆ. ಆದ್ದರಿಂದ ವಿದ್ಯುತ್ ಖಾಸಗೀಕರಣ, ಸ್ಮಾರ್ಟ್ ಮೀಟರ್ ಅಳವಡಿಕೆ ವಿರುದ್ಧ, ಪದೇ ಪದೇ ವಿದ್ಯುತ್ ಕಡಿತಗೊಳಿಸುತ್ತಿರುವುದರ ವಿರುದ್ಧ, ಸಣ್ಣ ವ್ಯಾಪಾರಸ್ಥರ ಮೇಲೆ ಹೆಚ್ಚಿನ ಶುಲ್ಕ ವಿಧಿಸುತ್ತಿರುವುದರ ವಿರುದ್ಧ ಮತ್ತು ಇತರ ಸಮಸ್ಯಗಳ ಪರಿಹಾರಕ್ಕಾಗಿ ಆಗ್ರಹಿಸಿ ಅಕ್ಟೋಬರ್ 8 ರಂದು ನಗರದ ವಡ್ಡರ ಬಂಡೆಯಲ್ಲಿರುವ ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘದ ಕಚೇರಿಯಲ್ಲಿ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಂಡಿದ್ದು ಜಿಲ್ಲೆಯ ಎಲ್ಲಾ ಗ್ರಾಹಕರು ಮತ್ತು ರೈತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಎ.ಶಾಂತಾ, ಸದಸ್ಯರಾದ ಗುರಳ್ಳಿ ರಾಜ, ಕಿರಣ್ ಅವರು ಉಪಸ್ಥಿತರಿದ್ದರು