ಬಳ್ಳಾರಿ, ಅ.21: ಬಳ್ಳಾರಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಚೇಳ್ಳಗುರ್ಕಿಯ ಸಿ.ಜಿ. ಹಂಪಣ್ಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ನಗರದ ಕನ್ನಡ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಖಂಡ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಹೆಸರುಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಬಳಿಕ ಹಂಪಣ್ಣ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು.
23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ 14 ಮತ್ತು 15ರಂದು ಎರಡು ದಿನಗಳ ಕಾಲ ಬಳ್ಳಾರಿಯಲ್ಲಿ ನಡೆಸಲು ಸಭೆ ತೀರ್ಮಾನಿಸಿತು.
ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಚೇಳ್ಳಗುರ್ಕಿಯಲ್ಲಿ 1938ರ ಆಗಸ್ಟ್ 27ರಂದು ಜನಿಸಿದ ಸಿ.ಜಿ. ಹಂಪಣ್ಣ ಅವರು 66 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮದ್ರಾಸ್ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ 1958ರಲ್ಲಿ ಉತ್ತೀರ್ಣರಾದ ಅವರು, ಮಲೆನಾಡು ಮಾಸಪತ್ರಿಕೆಯ ಸಹಸಂಪಾದಕರಾಗಿ, ಸಂಯುಕ್ತ ಕರ್ನಾಟಕದ ಉಪಸಂಪಾದಕರಾಗಿ ಹಾಗೂ ಈ ನಮ್ಮ ಕನ್ನಡನಾಡು ಪತ್ರಿಕೆಯ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವು ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲಾ ಸಮಾಚಾರ, ಚಿತ್ರಸುಧಾ, ವಿಜಯನಗರ ಎಕ್ಸ್‌ಪ್ರೆಸ್ ಮತ್ತು ಕನ್ನಡ ಸಿಂಧೂರ ಪತ್ರಿಕೆಗಳನ್ನು ಸ್ವತಂತ್ರವಾಗಿ ನಡೆಸಿದ ಅನುಭವ ಹೊಂದಿದ್ದಾರೆ. ಪತ್ರಿಕೋದ್ಯಮದ ಜತೆಗೆ ಸಾಹಿತ್ಯ ರಚನೆ, ಚಲನಚಿತ್ರ ಕಥೆ ರಚನೆ, ನಿರ್ಮಾಣ, ಹಂಚಿಕೆ ಹಾಗೂ ಪ್ರದರ್ಶನ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
'ಕನ್ನಡ ನಾಡು ಸೊಬಗಿನ ಬೀಡು', 'ಪ್ರೇಮಪಾಶ', 'ದಾರಿದೀಪ', 'ವಿಧಿವಿಲಾಸ', 'ನಂದನವನ', 'ಕಾಣಿಕೆ', 'ಒಡೆಯಿತು ಒಲವಿನ ಕನ್ನಡಿ' ಮತ್ತು 'ದೈವ ಸಂಕಲ್ಪ' ಸೇರಿದಂತೆ ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. 2011ರಲ್ಲಿ 'ನೆನಪಿನಂಗಳ' ಮತ್ತು 'ಸವಿ ನೆನಪು' ಎಂಬ ಆತ್ಮಕಥನದ ಕೃತಿಗಳನ್ನು ಪ್ರಕಟಿಸಿದ್ದಾರೆ.
ಹಂಪಣ್ಣ ಅವರಿಗೆ ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಬಸವ ಬೆಳಗು ಪ್ರಶಸ್ತಿ, ಮಹಾಂತ ಶ್ರೀ ಪ್ರಶಸ್ತಿ, ಬಸವಸಿರಿ ಪ್ರಶಸ್ತಿ, ಹೂಗಾರ ಪ್ರಶಸ್ತಿ, ಶ್ರೀಕೃಷ್ಣದೇವರಾಯ ಪ್ರಶಸ್ತಿ, ಶಂಕರ-ಭಾರ್ಗವ ಪ್ರಶಸ್ತಿ ಹಾಗೂ ಡಾ. ಡಿ.ವಿ. ಗುಂಡಪ್ಪ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು ಎಂದು ಗೌರವ ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.