ತಾಳಿಕೋಟೆ, ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆ ಹಾಗೂ ಕರ್ತವ್ಯನಿಷ್ಠೆಯನ್ನು ಪರಿಗಣಿಸಿ, ತಾಳಿಕೋಟಿಯ ಶ್ರೀ ಎಸ್.ಎಸ್. ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಬ್ರಹ್ಮಲಿಂಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕರಾದ ವಿಠ್ಠಲಸಿಂಗ್ ಅಣ್ಣುಸಿಂಗ್ ವಿಜಾಪುರ ಅವರಿಗೆ ೨೦೨೬-೨೭ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ವಿಜಯಪುರ ತಾಲ್ಲೂಕು ಘಟಕ ತಾಳಿಕೋಟಿ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸೆ.೨೭ರಂದು ವಿಜಯಪುರದ ಕಂದಗಲ್ ಹನಮಂತರಾಯ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸುದೀರ್ಘ ಸೇವಾವಧಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಶಿಸ್ತು ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ವಿಠ್ಠಲಸಿಂಗ್ ಅಣ್ಣುಸಿಂಗ್ ವಿಜಾಪುರ ಅವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಶ್ರೀ ಎಸ್.ಎಸ್. ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಪಾಟೀಲ, ಆಡಳಿತಾಧಿಕಾರಿ ಕಿರಣ್ ಎಚ್. ಪಾಟೀಲ, ಕಾರ್ಯದರ್ಶಿ ಸಚಿನ್ ಎಚ್. ಪಾಟೀಲ, ಪ್ರಾಥಮಿಕ ಶಾಲೆಯ ಮುಖ್ಯಗುರು ಜೆ.ಎಂ. ಕೊಣ್ಣೂರ ಸೇರಿದಂತೆ ಸಂಸ್ಥೆಯ ಸಮಸ್ತ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ತಾಳಿಕೋಟಿಯ ಹಿರಿಯರು ಮತ್ತು ಗಣ್ಯರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದರು.
ಶಿಕ್ಷಕರಿಗೆ ದೊರೆತ ಈ ಗೌರವವು ಸಂಸ್ಥೆಯ ಹೆಮ್ಮೆ ಹೆಚ್ಚಿಸಿದ್ದು, ಶಿಕ್ಷಕರ ಶೈಕ್ಷಣಿಕ ಸೇವೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.