ಬೆಂಗಳೂರು: ಉಪಚುನಾವಣೆಗಳ (By Election) ಫಲಿತಾಂಶ ಹೊರಬೀಳುವ ಮೊದಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ದೆಹಲಿ ಅಂಗಳದಲ್ಲಿ ತಮ್ಮ ಪವರ್ ಕ್ಲೈಮ್ ಆರಂಭಿಸಿದ್ದಾರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿದೆ.
ಹೌದು. ದಾವಣಗೆರೆ ಉಪಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಹಲವು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಆಪ್ತ ಸಚಿವರೊಂದಿಗೆ ಸಭೆ ನಡೆಸಿರುವುದು ಗಮನ ಸೆಳೆದಿದೆ. ಇತ್ತ ಡಿಕೆಶಿ ದೆಹಲಿಯಲ್ಲಿ ಗಾಂಧಿ ಕುಟುಂಬದ ನಾಯಕರನ್ನು ಭೇಟಿಯಾಗುವ ಯೋಜನೆ ಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರಿಯಲಿದೆಯಾ? ಅಥವಾ ಡಿಕೆಶಿಗೆ ಅಧಿಕಾರ ಹಸ್ತಾಂತರವಾಗಲಿದೆಯಾ? ಎಂಬುದು ಈಗ ರಾಜಕೀಯ ಯಕ್ಷಪ್ರಶ್ನೆಯಾಗಿದೆ. ಈ ಹಿಂದೆ ಎರಡು ಬಾರಿ ಬ್ರೇಕ್‌ಫಾಸ್ಟ್ ಮೀಟಿಂಗ್ ಮೂಲಕ ಸಿಎಂ-ಡಿಸಿಎಂ ಇಬ್ಬರೂ ಒಗ್ಗಟ್ಟಿನ ಸಂದೇಶ ನೀಡಿದ್ದರು.
ಆದರೆ ಬಹಿರಂಗ ಒಗ್ಗಟ್ಟಿನ ನಡುವೆಯೇ ಇಬ್ಬರ ಬೆಂಬಲಿಗ ಶಾಸಕರು ಪ್ರತ್ಯೇಕ ಹೇಳಿಕೆಗಳನ್ನು ನೀಡುತ್ತಿರುವುದು ಕುತೂಹಲ ಹೆಚ್ಚಿಸಿದೆ. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ತಂದೆಯೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಿದರೆ, ಡಿಕೆಶಿ ಬೆಂಬಲಿಗರು ಈ ಅವಧಿಯಲ್ಲೇ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಪ್ರತಿಪಾದಿಸುತ್ತಿದ್ದಾರೆ.
ಇಲ್ಲಿವರೆಗೆ ಹೈಕಮಾಂಡ್ ನಾಯಕರು ಪಂಚರಾಜ್ಯಗಳ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದರು. ಇದೀಗ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಡಿಕೆ ಸಹೋದರರು (DK Brothers) ದೆಹಲಿಗೆ ಆಗಮಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಗೆ ಹೈಕಮಾಂಡ್ ಮೇಲೆ ಒತ್ತಡ ತರಲು ಆಪ್ತ ಸಚಿವರ ನಿವಾಸದಲ್ಲಿ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಇತ್ತ ಡಿಕೆ ಸಹೋದರರು ದೆಹಲಿಯಲ್ಲಿ ಬೀಡುಬಿಟ್ಟು ಅಧಿಕಾರ ಹಸ್ತಾಂತರ ವಿಚಾರದಲ್ಲಿ ಸ್ಪಷ್ಟತೆ ಪಡೆಯಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಎರಡೂ ಬೆಳವಣಿಗೆಗಳನ್ನು ನೋಡಿದರೆ ಫಲಿತಾಂಶ ಬಳಿಕ ಮಹತ್ವದ ರಾಜಕೀಯ ಬದಲಾವಣೆ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಬಜೆಟ್ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಅವರು, ಜನರು ನಾನು ಮುಂದುವರಿಯಬೇಕೆಂದು ಬಯಸಿದ್ದಾರೆ ಎಂದು ಹೇಳಿದ್ದರು. ಆದರೆ ಅಂತಿಮ ತೀರ್ಮಾನ ಹೈಕಮಾಂಡ್ ಮಾಡುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ, ಬಜೆಟ್ ದಾಖಲೆಯ ಮೇಲೆ ನಂಬಿಕೆ ಇಲ್ಲ, ಅವಕಾಶ ಸಿಕ್ಕರೆ ಇನ್ನೆರಡು ಬಜೆಟ್ ಮಂಡಿಸುತ್ತೇನೆ ಎಂದೂ ಅವರು ಹೇಳಿದ್ದರು. ಎಲ್ಲ ನಿರ್ಧಾರಗಳಿಗೂ ಹೈಕಮಾಂಡ್ ಅಂತಿಮ ಎಂದು ಅವರು ಪುನರುಚ್ಚರಿಸಿದ್ದರು.