ನಟ ಡಾಲಿ ಧನಂಜಯ್ ಅಭಿನಯದ ‘ಅಣ್ಣಾ ಫ್ರಂ ಮೆಕ್ಸಿಕೋ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ರೀಷ್ಮಾ, ಉಮಾಶ್ರೀ, ರಂಗಾಯಣದ ರಘು, ನಾಗಭೂಷಣ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.
ಟೀಸರ್ ಬಿಡುಗಡೆಯ ಸಮಾರಂಭದಲ್ಲಿ ಭಾಗವಹಿಸಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದು, ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಹಾಗೂ ಹೊಸತನದ ಕಥೆಗಳನ್ನು ನೀಡುವ ಉದ್ದೇಶದೊಂದಿಗೆ, ನಮ್ಮ ಐರಾ ಫಿಲ್ಮ್ಸ್ ಚೊಚ್ಚಲ ಕಾಣಿಕೆಯಾಗಿ ‘ಅಣ್ಣಾ ಫ್ರಂ ಮೆಕ್ಸಿಕೋ’ ನಿರ್ಮಿಸಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಅದ್ದೂರಿ ಸಮಾರಂಭದಲ್ಲಿ ಟೀಸರ್ ಅನಾವರಣಗೊಳಿಸಲಾಯಿತು. ಕನ್ನಡ ಚಿತ್ರರಂಗದ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸುವ ಹಾಗೂ ಮುಂದಿನ ದಿನಗಳಲ್ಲಿ ಉತ್ತಮ ಸಾಮಾಜಿಕ ಮತ್ತು ಕೌಟುಂಬಿಕ ಕಥೆಗಳನ್ನು ಪ್ರೇಕ್ಷಕರಿಗೆ ನೀಡುವ ಆಸೆ ನಮ್ಮದು. ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕಿ ನಯನಾ ಮೋಟಮ್ಮ, ಚಿತ್ರದ ನಾಯಕ ಡಾಲಿ ಧನಂಜಯ್, ನಟಿ ರೀಷ್ಮಾ ನಾಣಯ್ಯ, ಚಿತ್ರದ ನಿರ್ದೇಶಕರಾದ ಶಂಕರ್ ಗುರು, ಸಹ ನಿರ್ಮಾಪಕ ಸತ್ಯ ರಾಯಲ್, ಜೀ ಸ್ಟುಡಿಯೋಜ್ ನ ದಿವ್ಯಾ, ಆನಂದ ಆಡಿಯೋದ ಶ್ಯಾಮ್, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಟ ನಾಗಭೂಷಣ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಉಪಸ್ಥಿತರಿದ್ದರು.