ಬೆಂಗಳೂರು, ಮೇ 01: ನಗರದಲ್ಲಿ ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದ ಜೋಡಿಗಳ ನಡುವಿನ ಕಲಹ ದುರಂತ ಅಂತ್ಯ ಕಂಡಿದೆ. ಪ್ರಿಯಕರ ಬೇರೆ ಯುವತಿಯೊಂದಿಗೆ ಮಾತನಾಡುತ್ತಿದ್ದಾನೆಂಬ ಅನುಮಾನದಿಂದ ಮೇಘಾಲಯ ಮೂಲದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜೀವಿನಿ ನಗರದಲ್ಲಿ ನಡೆದಿದೆ.
ಪ್ರೇಮಿಗಳ ನಡುವೆ 8 ವರ್ಷದ ವಯಸ್ಸಿನ ಅಂತರ
ಮೃತ ಯುವತಿಯನ್ನು ಮೇಘಾಲಯ ಮೂಲದ ಅಗತ ಬೈತಿಯಂಗುಂ (34) ಎಂದು ಗುರುತಿಸಲಾಗಿದೆ. ಈಕೆ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದು, ಮಣಿಪುರ ಮೂಲದ ನವಾಜ್ ಶರೀಫ್ (26) ಎಂಬಾತನೊಂದಿಗೆ ಕಳೆದ ಮೂರು ವರ್ಷಗಳಿಂದ ಸಂಜೀವಿನಿ ನಗರದ ಬಾಡಿಗೆ ಮನೆಯಲ್ಲಿ ಲಿವಿನ್ ರಿಲೇಷನ್‌ನಲ್ಲಿ ವಾಸವಾಗಿದ್ದಳು. ಇಬ್ಬರ ನಡುವೆ 8 ವರ್ಷದ ವಯಸ್ಸಿನ ಅಂತರವಿದ್ದು, ಇದೇ ಕಾರಣಕ್ಕೆ ಪದೇಪದೇ ಮನಸ್ತಾಪ ಮತ್ತು ಜಗಳಗಳು ನಡೆಯುತ್ತಿದೆಯೆಂದು ಹೇಳಲಾಗಿದೆ. ನವಾಜ್ ಶರೀಫ್ ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡಿದಾಗ ಅಗತ ಅನುಮಾನ ಪಡುತ್ತಿದ್ದಳು ಎನ್ನಲಾಗಿದೆ.
ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ
ಕಳೆದ ಬುಧವಾರ ರಾತ್ರಿ ನವಾಜ್ ಶರೀಫ್ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಅಗತ, ಬೇರೆ ಯುವತಿಯ ಜೊತೆ ಮಾತನಾಡುತ್ತಿದ್ದೀಯೆಂದು ಅನುಮಾನಿಸಿ ಜಗಳ ಆರಂಭಿಸಿದ್ದಾಳೆ. ಮಾತಿನ ಚಕಮಕಿ ತೀವ್ರಗೊಂಡು ವಾಗ್ವಾದಕ್ಕೆ ತಿರುಗಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ನವಾಜ್ ಮನೆಯಿಂದ ಹೊರ ಹೋಗಿದ್ದಾನೆ. ಈ ವೇಳೆ ಅಗತ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ಮನೆಗೆ ಮರಳಿದ ನವಾಜ್ ಘಟನೆ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೊಡಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಅನುಮಾನಗಳ ನಡುವೆಯೇ ಮೂರು ವರ್ಷಗಳ ಸಂಬಂಧ ದುರಂತವಾಗಿ ಅಂತ್ಯಗೊಂಡಿರುವುದು ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.