ಬಳ್ಳಾರಿ. ಸೆ. 28:: ಕಣ್ಣಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವೈದ್ಯಕೀಯ ಚಿಕಿತ್ಸೆಯನ್ನೂ ಮೀರಿ ರೋಗಿಗಳಿಗೆ ನಿರಂತರ ಆರೈಕೆ ಹಾಗೂ ಬೆಂಬಲ ನೀಡುವ ಉದ್ದೇಶದಿಂದ ಬಳ್ಳಾರಿಯ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯು "ಆರೋಗ್ಯಕರ ಕಣ್ಣುಗಳು ಸಮಾವೇಶ" ಎಂಬ ರೋಗಿಗಳ ಬೆಂಬಲ ಸಮೂಹವನ್ನು ಭಾನುವಾರ ಪ್ರಾರಂಭಿಸಿಆರೋಗ್ಯಕರ ಕಣ್ಣುಗಳು ಸಮಾವೇಶ ಪೇಷೆಂಟ್ ಸಪೋರ್ಟ್ ಗ್ರೂಪ್ಗೆ ಚಾಲನೆ ನೀಡಲಾಯಿತು.
ಗಾಂಧಿನಗರ ಮುಖ್ಯ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಭಾನುವಾರದಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಡಿವೈಎಸ್ಪಿ ಶ್ರೀಧರ ದೊಡ್ಡಿ, "ಆರೋಗ್ಯ ರಕ್ಷಣೆ ಎಂದರೆ ಕೇವಲ ಚಿಕಿತ್ಸೆಯಷ್ಟೇ ಅಲ್ಲ; ಅದು ಕರುಣೆ, ಬಾಂಧವ್ಯ ಮತ್ತು ನಿರಂತರ ಬೆಂಬಲಕ್ಕೆ ಸಂಬಂಧಿಸಿದ್ದಾಗಿದೆ. ಈ ನಿಟ್ಟಿನಲ್ಲಿ ಡಾ. ಅಗರ್ವಾಲ್ಸ್ ಆಸ್ಪತ್ರೆಯು ಅರ್ಥಪೂರ್ಣ ವೇದಿಕೆಯನ್ನು ಸೃಷ್ಟಿಸಿದೆ" ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಮಾರಂಭದಲ್ಲಿ 400ಕ್ಕೂ ಹೆಚ್ಚು ಹಳೆಯ ರೋಗಿಗಳು, ಆರೈಕೆದಾರರು ಹಾಗೂ ಆಸ್ಪತ್ರೆಯ ವೈದ್ಯಕೀಯ ತಂಡ ಭಾಗವಹಿಸಿ, ತಮ್ಮ ಯಶಸ್ವಿ ದೃಷ್ಟಿ ಪಯಣವನ್ನು ಸಂಭ್ರಮಿಸಿದರು. ರೋಗಿಗಳಲ್ಲಿ ಭಾವನಾತ್ಮಕ ಬೆಂಬಲ, ಜಾಗೃತಿ ಮತ್ತು ಆರೋಗ್ಯಕರ ಕಣ್ಣಿನ ಆರೈಕೆ ಅಭ್ಯಾಸಗಳನ್ನು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಕಣ್ಣಿನ ತಜ್ಞ ಡಾ. ಮನೋಹರ ಅನಂತಪ್ರಭು, 'ಪಿನ್ಹೋಲ್ ಪ್ಯುಪಿಲೊಪ್ಲ್ಯಾಸ್ಟಿ'ಯಂತಹ ಸಂಕೀರ್ಣ ಕಣ್ಣಿನ ಚಿಕಿತ್ಸೆಗಳ ಸವಾಲುಗಳು ಮತ್ತು ಅವುಗಳ ಯಶಸ್ವಿ ನಿರ್ವಹಣೆಯ ಕುರಿತು ವಿವರಿಸಿದರು. "ರೋಗಿಯೊಂದಿಗಿನ ನಮ್ಮ ಬಾಂಧವ್ಯ ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ಇಂತಹ ಸಪೋರ್ಟ್ ಗ್ರೂಪ್ಗಳು ರೋಗಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಲು ಸಹಾಯ ಮಾಡುತ್ತವೆ" ಎಂದರು.
ಡಾ. ಶ್ರೀನಿವಾಸನ್ ಜಿ. ರಾವ್ ಮಾತನಾಡಿ, "ರೋಗಿಗಳ ಆರೈಕೆಯು ಆಸ್ಪತ್ರೆಯ ಗೋಡೆಗಳನ್ನು ಮೀರಿ ಬೆಳೆಯಬೇಕು. ಹಂಚಿಕೊಂಡ ಅನುಭವಗಳು ಮತ್ತು ನಿರಂತರ ಮಾರ್ಗದರ್ಶನವು ರೋಗಿಗಳಲ್ಲಿ ಆತ್ಮವಿಶ್ವಾಸ ಹಾಗೂ ದೀರ್ಘಕಾಲೀನ ಆರೋಗ್ಯವನ್ನು ಖಚಿತಪಡಿಸುತ್ತದೆ" ಮತ್ತು ಈ 'ಆರೋಗ್ಯಕರ ಕಣ್ಣುಗಳ ಸಮಾವೇಶ' ಬೆಂಬಲ ಸಮೂಹವು ರೋಗಿಗಳಿಗೆ ವೈದ್ಯಕೀಯ ತಜ್ಞರೊಂದಿಗೆ ಸಂಪರ್ಕದಲ್ಲಿರಲು, ನಿರಂತರ ಜಾಗೃತಿ ಪಡೆಯಲು ಹಾಗೂ ಇತರರಿಗೆ ಪ್ರೇರಣೆಯಾಗಲು ಒಂದು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಕೇವಲ ವೈದ್ಯಕೀಯ ಸೇವೆಗೆ ಸೀಮಿತವಾಗದೆ, ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ಸಮಗ್ರ ರೋಗಿ-ಕೇಂದ್ರಿತ ಆರೈಕೆ ನೀಡುವಲ್ಲಿ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ ಹೊಸ ಹೆಜ್ಜೆ ಇಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥರಾದ (ಕ್ಲಿನಿಕಲ್ ಸರ್ವಿಸಸ್) ಡಾ. ಶ್ರೀನಿವಾಸನ್ ಜಿ. ರಾವ್, ಹಿರಿಯ ಕಣ್ಣಿನ ತಜ್ಞರಾದ ಡಾ. ಮನೋಹರ ಅನಂತಪ್ರಭು, ಕಣ್ಣಿನ ತಜ್ಞರಾದ ಡಾ. ವಿಕಾಸ್ ಐಲಿ, ಕಾರ್ಯಾಚರಣೆ ಮತ್ತು ವ್ಯವಹಾರ ವಿಭಾಗದ ಉಪಾಧ್ಯಕ್ಷರಾದ ಶ್ರೀ ಧೀರಜ್ ಇ.ಟಿ. ಹಾಗೂ ಆಸ್ಪತ್ರೆಯ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.