ಬಳ್ಳಾರಿ, ಸೆ.23: ನಾಟಕಗಳು ಮನರಂಜನೆಯ ಜೊತೆಗೆ ಸಾಮಾಜಿಕ ಎಚ್ಚರ ಮೂಡಿಸುವುದರೊಂದಿಗೆ ಹೊಸ ಆಲೋಚನೆಗಳಿಗೆ ಪ್ರೇರಣೆ ನೀಡುತ್ತವೆ ಎಂದು ಸಂಗಂ ಟ್ರಸ್ಟ್ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ ಹೇಳಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಸಂಜೆ ಧಾತ್ರಿ ರಂಗ ಸಂಸ್ಥೆ ಆಯೋಜಿಸಿದ್ದ ನಟ ಪ್ರಕಾಶ್ ರಾಜ್ ಸಾರಥ್ಯದ ನಿರ್ದಿಗಂತ ತಂಡದ ಪ್ರಾಜೆಕ್ಟ್ ಪಂಚತಂತ್ರ ನಾಟಕದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಳ್ಳಾರಿ ನಗರದಲ್ಲಿ ಹೊಸ ಅಲೆಯ ನಾಟಕಗಳ ಪ್ರದರ್ಶನ ಹೆಚ್ಚಾಗಬೇಕು. ರಂಗಾಸಕ್ತರು ನಾಟಕಗಳನ್ನು ಪ್ರೋತ್ಸಾಹಿಸುವ ಮೂಲಕ ರಂಗಭೂಮಿಯ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್, ರಂಗಭೂಮಿ ಇಂದು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಕಲೆಯ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಲೇಖಕ ಸಿದ್ದರಾಮ ಕಲ್ಮಠ, ಬಳ್ಳಾರಿಯಂತಹ ಪ್ರದೇಶದಲ್ಲಿ ಇತ್ತೀಚೆಗೆ ರಂಗ ಚಟುವಟಿಕೆಗಳು ಚುರುಕುಗೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದರು.
ವೇದಿಕೆಯಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುರುಷೋತ್ತಮ ಹಂದಿಹಾಳು, ಭಾವೈಕ್ಯತೆ ವೇದಿಕೆಯ ಪಿ. ಅಬ್ದುಲ್ಲಾ, ಕಲಾವಿದ ಎ.ಎಂ.ಪಿ. ವೀರೇಶಸ್ವಾಮಿ ಹಾಗೂ ನಿರ್ದೇಶಕ ಶಕೀಲ್ ಅಹ್ಮದ್ ಉಪಸ್ಥಿತರಿದ್ದರು.
ಧಾತ್ರಿ ಸಂಸ್ಥೆಯ ಕಾರ್ಯದರ್ಶಿ ಮಂಜು ಸಿರಿಗೇರಿ ಕಾರ್ಯಕ್ರಮ ನಿರ್ವಹಿಸಿದರು. ಆಲಾಪ ಸಂಸ್ಥೆಯ ರಮಣಪ್ಪ, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ, ಕಲಾವಿದ ತಿಪ್ಪೇಸ್ವಾಮಿ ಮುದ್ದಟನೂರು, ಸಂಗಂ ಟ್ರಸ್ಟ್ ಕಾರ್ಯದರ್ಶಿ ಶಿವಲಿಂಗಪ್ಪ ಹಂದಿಹಾಳು, ಲೇಖಕರಾದ ದಸ್ತಗೀರಸಾಬ್ ದಿನ್ನಿ ಹಾಗೂ ವೀರೇಂದ್ರ ರಾವಿಹಾಳು ಉಪಸ್ಥಿತರಿದ್ದರು.
ನಂತರ ನಡೆದ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.