ಬಳ್ಳಾರಿ. ಸೆ. 29: : ನಗರದ ಸಿರುಗುಪ್ಪ ರಸ್ತೆಯ ಕೋದಂಡರಾಮ ದೇವಸ್ಥಾನದಲ್ಲಿ ‘ಡಿ ಟು ಡಿ’
(ಡ್ರಗ್ಸ್ ಟು ಡೆತ್ ) ಚಿತ್ರದ ಸ್ಕ್ರಿಪ್ಟ್ ಗೆ ಪೂಜೆ ನೆರವೇರಿಸಿ ಪೋಲಾ ಪ್ರವೀಣ್ ಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರ ನಿರ್ಮಾಣಕ್ಕೆ ಚಾಲನೆ ನೀಡಿದರು.
ಪೋಲಾ ಮೂವೀಸ್, ಡಿಜೆ ಎಂಟರ್ಪ್ರೈಸಸ್ ಹಾಗೂ ಎಸ್ಎಂಪಿಟಿ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.
ಪೋಲಾ ಪ್ರವೀಣ್, ದಿನೇಶ್, ಕೋಟ್ರೇಶ್ ಹಾಗೂ ಮುರಳಿ ಕೃಷ್ಣ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಡಿಟುಡಿ ಚಿತ್ರದ ಕಥೆಯನ್ನು ಬಿ.ವಿ. ಹಿರೇಮಠ ಅವರು ಬರೆದಿದ್ದು, ಉಮೇಶ್ ವರ್ಮ ರಚನೆ ಹಾಗೂ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮೈಸೂರಿನ ಸ್ವಾಮಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ.
ಚಿತ್ರದಲ್ಲಿ ಹಿರಿಯ ನಟಿ ಶ್ರುತಿ, ಉದ್ಯಮಿ ಪೋಲಾ ಪ್ರವೀಣ್, ನಾಯಕ ನಟ ತರುಣ್, ಕುರುಗೋಡಿನ ಡ್ಯಾನ್ಸರ್ ಪೂಜಾ, ಚಾಂದನಿ ಹಾಗೂ ಬೆಂಗಳೂರಿನ ಮುರಳೀಧರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಲಿದ್ದಾರೆ.
ಬಳ್ಳಾರಿಯ ಸ್ಥಳೀಯ ಕಲಾವಿದರಿಗೆ ಚಿತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಕಾರ್ಯಕ್ರಮದಲ್ಲಿ ಎಂಎಲ್ಸಿ ಮನೋಹರ್ ಮಸ್ಕಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವೀರೇಶಪ್ಪ, ಉದ್ಯಮಿಗಳಾದ ಜಿ.ಕೆ. ಸ್ವಾಮಿ, ಅಶೋಕ್ ಚೌಹಾಣ್, ಬ್ರಹ್ಮಯ್ಯ ನಾಯ್ಡು, ಬಿಜೆಪಿ ಮುಖಂಡ ಹಂಪಿ ರಮಣ, ಸಾಹಿತಿ ವೀರೇಂದ್ರ ರಾವಿಹಾಳ್, ಸಮಾಜ ಸೇವಕಿ ಅನಿತಾ ಜೈನ್, ಚಿತ್ರನಟ ಮಂಜು ಹಾಗೂ ಶಾರದಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಮಂಜುನಾಥ ಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.