ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ 21 ವರ್ಷದ ಡೆಲಿವರಿ ಏಜೆಂಟ್ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಬಂಧನಕ್ಕೊಳಗಾಗಿದ್ದಾರೆ.
ನೈಋತ್ಯ ದೆಹಲಿಯ ಜಾಫರ್‌ಪುರ್ ಕಲಾನ್ ಪ್ರದೇಶದಲ್ಲಿ ಮಾತಿನ ಚಕಮಕಿ ಬಳಿಕ ಡೆಲಿವರಿ ಏಜೆಂಟ್ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿ, ಆತನ ಸ್ನೇಹಿತನಿಗೆ ಗಾಯಗೊಳಿಸಿದ ಆರೋಪದ ಮೇಲೆ ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಯ ಬಂಧನ: ಘಟನೆ ನಡೆದ 24 ಗಂಟೆಗಳೊಳಗೆ ಆರೋಪಿ ಬಂಧನವಾಗಿದ್ದು, ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಹೆಡ್ ಕಾನ್ಸ್‌ಟೇಬಲ್ ನೀರಾಜ್ ಅವರನ್ನು ಜಾಫರ್‌ಪುರ್ ಪ್ರದೇಶದಲ್ಲೇ ಮಧ್ಯರಾತ್ರಿ ವೇಳೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರು ಸ್ಥಳೀಯ ಪೊಲೀಸ್ ಘಟಕದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರೂ, ಘಟನೆ ಸಂಭವಿಸಿದಾಗ ಕರ್ತವ್ಯದಲ್ಲಿರಲಿಲ್ಲ ಎಂದು ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಭಾನುವಾರ ಮುಂಜಾನೆ, ನೀರಾಜ್ ಡೆಲಿವರಿ ಏಜೆಂಟ್ ಪಾಂಡವ್ ಕುಮಾರ್ ಮತ್ತು ಅವರ ಸ್ನೇಹಿತ ಕ್ರಿಶನ್ ಅವರೊಂದಿಗೆ ನಡೆದ ತೀವ್ರ ವಾಗ್ವಾದದ ಬಳಿಕ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಈ ದಾಳಿಯಲ್ಲಿ ಕುಮಾರ್ ಮೃತರಾಗಿದ್ದು, ಕ್ರಿಶನ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಿನ ಜಾವ ಸುಮಾರು 2.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಹುಟ್ಟುಹಬ್ಬದ ಕಾರ್ಯಕ್ರಮ ಮುಗಿಸಿ ರಸ್ತೆ ಬದಿಯಲ್ಲಿ ನಿಂತಿದ್ದಾಗಲೇ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸ್ಥಳೀಯ ನಿವಾಸಿಯಾಗಿದ್ದ ನೀರಾಜ್ ಜಗಳದ ನಡುವೆ ಕುಮಾರ್ ಮೇಲೆ ಗುಂಡು ಹಾರಿಸಿದ್ದು, ಅದು ಅವರ ಎದೆಗೆ ತಗುಲಿದರೆ, ನಂತರ ಕ್ರಿಶನ್‌ಗೂ ಗಾಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರೂ, ಕುಮಾರ್ ಅವರನ್ನು ವೈದ್ಯರು ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ.
ತನಿಖೆ ಮುಂದುವರಿಕೆ: ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದರಿಂದ ಜಾಫರ್‌ಪುರ್ ಕಲಾನ್ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಪತ್ತೆಹಚ್ಚಲು ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಸ್ಥಳೀಯ ಗುಪ್ತಚರ ಮಾಹಿತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಕೊನೆಗೂ ನೀರಾಜ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಗೆ ಕಾರಣವಾದ ನಿಖರ ಹಿನ್ನೆಲೆ ಹಾಗೂ ಘಟನೆಗಳ ಸರಮಾಲೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.