ಸಿರುಗುಪ್ಪ: 16;"ಯುವಜನತೆಯಲ್ಲಿ ಜಾನಪದ ಸಂಸ್ಕೃತಿಯ ಅರಿವು ಮೂಡಿಸಲು ಇಂತಹ ಸ್ಪರ್ಧೆಗಳು ಪೂರಕ," ಎಂದು
ಕನ್ನಡ ಜಾನಪದ ಪರಿಷತ್ತಿನ ಗೌರವಾಧ್ಯಕ್ಷ ಹಾಗೂ ಜಾನಪದ ತಜ್ಞರು ಡಾ. ಚೇತನ್ ಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿನ ಬಿ.ಇ. ಹನುಮಂತಮ್ಮ ಸ್ಮಾರಕ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಜಾನಪದ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಬುಧವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಜಾನಪದ ಗೀತೆಗಳ ಸ್ಪರ್ಧೆಯಲ್ಲಿ ಮಾತನಾಡಿದರು.
ಪರಿಷತ್ತಿನ ಅಧ್ಯಕ್ಷ ಎಚ್.ಎಂ.ಶಿವಪ್ರಕಾಶ್ ಅವರು ಮಾತನಾಡಿ, ಜಾನಪದ ಕಲೆಗಳ ಪ್ರಾಚೀನತೆ, ಅವುಗಳ ಐತಿಹಾಸಿಕ ಹಿನ್ನೆಲೆ ಹಾಗೂ ಇಂದಿನ ಆಧುನಿಕ ಯುಗದಲ್ಲೂ ಅವುಗಳ ಪ್ರಾಮುಖ್ಯತೆಯನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದರು.
ನಮ್ಮ ಗ್ರಾಮೀಣ ಸಂಸ್ಕೃತಿಯ ಜೀವನಾಡಿಯಾಗಿರುವ ಜಾನಪದ ಸಾಹಿತ್ಯ ಮತ್ತು ಆಚರಣೆಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿಕೊಟ್ಟರು.
ನಿವೃತ್ತ ಪ್ರಾಂಶುಪಾಲ ಶಿವಕುಮಾರ್ ಬಳೆಗಾರ ಅವರು ಮಾತನಾಡಿದರು.
ಸ್ಪರ್ಧೆಯಲ್ಲಿ ಅತ್ಯುತ್ತಮ ಗಾಯನ ಪ್ರದರ್ಶಿಸಿ ಶಶಿಕಲಾ ಪ್ರಥಮ, ಸಿದ್ದಲಿಂಗ ದ್ವಿತೀಯ, ಅಂಕಿತ ತೃತೀಯ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.
ಪರಿಷತ್ತಿನ ಕಾರ್ಯದರ್ಶಿ ಎಚ್.ಎಸ್.ನಾಗರಾಜ್, ಸಂಚಾಲಕ ಎಂ.ಆಂಜನೇಯ, ಸಹ ಕಾರ್ಯದರ್ಶಿ ಲೋಕೇಶ್ ರೆಡ್ಡಿ ಹಾಗೂ ಖಜಾಂಚಿ ದೊಡ್ಡ ಹುಸೇನಪ್ಪ, ಸದಸ್ಯರಾದ ಬಿ. ವೈ.ವೆಂಕಟೇಶ್, ಬಾರಿಕರ ಬಸಪ್ಪ, ಮಲ್ಲೇಶ್ವರಿ, ತಿಮ್ಮಪ್ಪ, ಹನುಮೇಶ್, ತ್ರಿವೇಣಿ ಉಪಸ್ಥಿತರಿದ್ದರು.