ಹುನಗುಂದ,ಅ,೦೮ : ಪಟ್ಟಣದ ವಿದ್ಯಾನಗರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅರಣ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ೭೨ ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ವನ್ಯಜೀವಿಗಳ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ವೇಳೆ ವಲಯ ಅರಣ್ಯ ಅಧಿಕಾರಿ ಜಯವರ್ಧನ ತಳವಾರ ಮಕ್ಕಳ ವನ್ಯಜೀವಿ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ ಭಾರತವು ವೈವಿಧ್ಯಮಯ ವನ್ಯಜೀವಿಗಳ ತಾಣವಾಗಿದ್ದು. ಪರಿಸರ, ಅರಣ್ಯ ಹಾಗೂ ಜೀವ ವೈವಿಧ್ಯತೆಯನ್ನು ಸಂರಕ್ಷಿಸುವುದು ಮತ್ತು ವಿನಾಶದ ಅಂಚಿನಲ್ಲಿರುವ ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುವುದೇ ವನ್ಯ ಜೀವಿ ಸಪ್ತಾಹ ಉದ್ದೇಶವಾಗಿದೆ. ಇಂದಿನ ಮಕ್ಕಳು ನಾಳಿನ ಭವಿಷ್ಯದ ಪ್ರಜೆಗಳಾದ ನೀವುಗಳು ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯವರ್ಗದ ರಕ್ಷಣೆಯ ಬಗ್ಗೆ ತಿಳಿದುಕೊಂಡು ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ವಲಯ ಅರಣ್ಯ ಸಂಪನ್ಮೂಲ ವ್ಯಕ್ತಿ ಮಹೇಶ ಮರೆಯನ್ನವರ ಮಾತನಾಡಿ ಪ್ರಪಂಚದ ಜೀವವೈವಿಧ್ಯ ಪ್ರದೇಶಗಳಲ್ಲಿ ಒಂದಾಗಿರುವ ಭಾರತ. ವಿಶ್ವದ ೩೬ ಜೀವವೈವಿಧ್ಯ ಹಾಟ್ಸ್ಪಾಟ್ಗಳಲ್ಲಿ ಮೂರು ಪ್ರದೇಶ ಭಾರತದಲ್ಲಿ ಕಂಡು ಬರುತ್ತವೆ. ಮನುಷ್ಯನ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡುವುದರಿಂದ ಮತ್ತು ವನ್ಯಜೀವಿಗಳನ್ನು ಬೇಟೆಯಾಡುವುದರಿಂದ ಪರಿಸರ ಸಮತೋಲನದ ಮೇಲೆ ದುಷ್ಪರಿಣಾಮ ಉಂಟಾಗುವುದರ ಜೊತಗೆ ವನ್ಯಜೀವಿಗಳ ಸಂತತಿ ಕಡಿಮೆಯಾಗುತ್ತಾ ಹೋಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಅರಣ್ಯ, ಪ್ರಾಣಿ, ಪಕ್ಷಿ ಸಂರಕ್ಷಿಸುವುದು ಜೊತೆಗೆ ಜೀವ ವೈವಿಧ್ಯತೆಯನ್ನು ಕಾಪಾಡುವ ಕೆಲಸ ನಿಮ್ಮಿಂದಾಗಬೇಕು ಎಂದರು.
ಉರಗ ರಕ್ಷಕ ಕೃಷ್ಣಾ ಕಾಂಬಳೆ ಮಾತನಾಡಿ ಯಾವುದೇ ಹಾವು ಕಡಿದ ಸಂದರ್ಭ ಬಾಯಿಯಿಂದ ವಿಷ ತೆಗೆಯುವ ಪ್ರಯತ್ನ ಮಾಡಬಾರದು.ಕಚ್ಚಿದ ಹಾವು ವಿಷಪೂರಿತವೋ, ವಿಷ ರಹಿತವೋ ಎಂಬುದನ್ನು ತಿಳಿಯುವ ಪ್ರಯತ್ನ ಮಾಡಬೇಕು. ತಕ್ಷಣ ವೈದ್ಯಕೀಯ ನೆರವು ಪಡೆಯಲು ಮುಂದಾಗಬೇಕು. ಹಾವುಗಳನ್ನು ಬಡಿಯುವ ಬದಲು ಅವುಗಳನ್ನು ಉರಗ ತಜ್ಞರಿಂದ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವ ಕಾರ್ಯವನ್ನು ಮಾಡಬೇಕು ಎಂದರು.
ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯ ಮುಖ್ಯೋಪಾಧ್ಯಾಯನಿ ಕೆ. ಸಾವಿತ್ರಿ, ಪ್ರಭಾರ ವಲಯ ಅರಣ್ಯಾಧಿಕಾರಿ ಡಿ. ಜೆ. ಸೌಮ್ಯಶ್ರೀ, ಸಾಮಾಜಿಕ ವಲಯ ಅರುಣ್ಯ ಅಧಿಕಾರಿ ಮಹೇಶ ಕಲ್ಲೂರ, ಉಪ ವಲಯ ಅರಣ್ಯ ಅಧಿಕಾರಿ ಶಂಕ್ರಯ್ಯ ಕಂಬಿಮಠ ಮತ್ತು ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.