ಬೆಂಗಳೂರು: ರೈತರ (Farmers) ಸಮಾಧಿಯ ಮೇಲೆಯೇ ಸರ್ಕಾರ ರಾಜಕೀಯ ಪ್ರದರ್ಶನ ನಡೆಸುತ್ತಿದೆ ಎಂದು ಸರ್ಕಾರದ ಸಾಧನಾ ಸಮಾವೇಶಕ್ಕೆ (Congress Sadhana Samavesha) ಕೇಂದ್ರ ಸಚಿವ H. D. Kumaraswamy ತೀವ್ರ ಟೀಕೆ ವ್ಯಕ್ತಪಡಿಸಿದರು.
ಬೆಂಗಳೂರುದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸಾಧನಾ ಸಮಾವೇಶದ ಹೆಸರಿನಲ್ಲಿ ಪ್ರಚಾರ ರಾಜಕಾರಣ ಮಾಡುತ್ತಿದೆ. ಕಳೆದ ವರ್ಷವೂ ಇದೇ ರೀತಿಯ ಕಾರ್ಯಕ್ರಮ ಮಾಡಿ ಬಣ್ಣಬಣ್ಣದ ಜಾಹೀರಾತುಗಳ ಮೂಲಕ ಜನರನ್ನು ಸೆಳೆಯಲು ಯತ್ನಿಸಿದ್ದರು. 1.54 ಲಕ್ಷ ಹಕ್ಕುಪತ್ರ ವಿತರಣೆ ಮಾಡುವ ಭರವಸೆ ನೀಡಿದ್ದರೂ ಜನರು ಇನ್ನೂ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಜಾಹೀರಾತುಗಳನ್ನು ನೋಡಿದರೆ ರಾಜ್ಯದಲ್ಲಿ ಯಾರೂ ಮಾಡದ ಸಾಧನೆಗಳನ್ನು ನಾವು ಮಾಡಿದ್ದೇವೆ ಎಂಬಂತೆ ಬಿಂಬಿಸಲಾಗುತ್ತಿದೆ. ಈಗ ಮತ್ತೊಂದು ಹೊಸ ಭೂ ಗ್ಯಾರಂಟಿ ಘೋಷಣೆ ಮಾಡಿ ಜನರ ಗಮನ ಬೇರೆಡೆ ತಿರುಗಿಸಲು ಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಕೆಲ ಸಚಿವರು ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ 2023ರಲ್ಲಿ 2,400ಕ್ಕೂ ಹೆಚ್ಚು ಹಾಗೂ 2024ರಲ್ಲಿ ಸುಮಾರು 2,900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಈ ಗಂಭೀರ ವಾಸ್ತವವನ್ನು ಸರ್ಕಾರ ಮುಚ್ಚಿಡಲು ಪ್ರಯತ್ನಿಸುತ್ತಿದೆ. ಎರಡು ವರ್ಷಗಳಲ್ಲಿ 5 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಸರ್ಕಾರದ ನಿಜವಾದ ಸಾಧನೆ ಎಂದು ಕಿಡಿಕಾರಿದರು.
ರಾಜ್ಯದ ಅಭಿವೃದ್ಧಿ ಕುರಿತು ಸರ್ಕಾರ ಹೇಳಿಕೊಳ್ಳುತ್ತಿರುವುದೆಲ್ಲ ಕೇವಲ ಪ್ರಚಾರ ಮಾತ್ರ. ಸ್ವಲ್ಪ ಮಳೆ ಬಂದರೂ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ನೀರು ನಿಂತು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಮಾವೇಶ ನಡೆಸುತ್ತಿದೆ. ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಅಧಿಕಾರಿಗಳಿಗೆ ಒತ್ತಡ ಹೇರಲಾಗಿದೆ. ಸರ್ಕಾರದ ಕಾರ್ಯಕ್ರಮಕ್ಕೆ ಸ್ವಯಂಪ್ರೇರಿತವಾಗಿ ಜನ ಬರುತ್ತಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಯಂತ್ರಾಂಗ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ರೈತರ ನೋವಿನ ಮೇಲೆಯೇ ಸರ್ಕಾರ ರಾಜಕೀಯ ಪ್ರದರ್ಶನ ಮಾಡುತ್ತಿರುವುದು ಖಂಡನೀಯ ಎಂದರು.
ಇದೇ ವೇಳೆ ಇಂದು Akhanda Srinivas Murthy ನಿವಾಸಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಅವರೊಂದಿಗೆ ರಾಜಕೀಯ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಅಖಂಡ ಶ್ರೀನಿವಾಸಮೂರ್ತಿ ಶೀಘ್ರದಲ್ಲೇ ಜೆಡಿಎಸ್‌ಗೆ ಸೇರ್ಪಡೆಯಾಗಲಿದ್ದಾರೆ. ಅವರು ಈ ಹಿಂದೆ ನನ್ನ ಪಕ್ಷದಿಂದ ಎರಡು ಬಾರಿ ಆಯ್ಕೆಯಾಗಿದ್ದರು. ಬಳಿಕ ಕಾಂಗ್ರೆಸ್‌ಗೆ ತೆರಳಿದ್ದರೂ ಇದೀಗ ಮತ್ತೆ ಜೆಡಿಎಸ್‌ವೇ ಸರಿಯಾದ ವೇದಿಕೆ ಎಂದು ನಿರ್ಧರಿಸಿದ್ದಾರೆ. ಅವರ ಕುಟುಂಬದವರ ಮನವಿಯ ಮೇರೆಗೆ ಮನೆಗೆ ಭೇಟಿ ನೀಡಿದ್ದೇನೆ. ಶೀಘ್ರದಲ್ಲೇ ಭಾರಿ ಸಾರ್ವಜನಿಕ ಕಾರ್ಯಕ್ರಮದ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.