ಕೊಪ್ಪಳ, (ಏಪ್ರಿಲ್ 30): ಗಂಗಾವತಿ (Gangavathi) ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್ಎನ್ ವೆಂಕಿ ಕೊಲೆ ಪ್ರಕರಣದ (Venkatesh Kurbur Murder Case) ಆರು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜೊತೆ ದಂಡ ವಿಧಿಸಲಾಗಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಗಂಗಾವತಿ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ, ಆರು ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ ಇಂದು (ಏಪ್ರಿಲ್ 30) ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಆರು ಜನರಿಗೆ ತಲಾ ಮೂರು ಲಕ್ಷ ದಂಡ ವಿಧಿಸಿದ್ದಾರೆ. ರವಿ, ವಿಜಯ್ ಅಲಿಯಾಸ್ ಮೈಲಾರಿ, ಧನರಾಜ್, ಭೀಮ್ ಅಲಿಯಾಸ್ ಭರತ್, ಸಲೀಮ್ ಮಹಮ್ಮದ್ ರಫೀಕ್ ಹಾಗೂ ಗಂಗಾಧರ ಗೌಳಿ ಗಲ್ಲು ಶಿಕ್ಷೆಗೆ ಗುರಿಯಾದವರು.
ಮೊದಲಿಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ, ಅಪರಾಧಿಗಳು ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯ ಬಗ್ಗೆಯೂ ಪರಿಶೀಲನೆ ನಡೆಸಿದರು. ಗಂಗಾವತಿಯ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದ ಮಾರುತಿ ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ವೆಂಕಟೇಶ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಅಲ್ಲದೇ ಮಾರುತಿ ಚಿಕಿತ್ಸೆಗೆ ಕೊನೆಯವರೆಗೂ ಬೆಂಬಲವಾಗಿ ನಿಂತಿದ್ದ ಎಂಬ ಕಾರಣಕ್ಕೆ ವೆಂಕಟೇಶನನ್ನು ಕೊಲೆ ಮಾಡಿದ್ದೀರಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಭ್ಯ ನಾಗರಿಕ ಸಮಾಜ ಇಂತಹ ಕೃತ್ಯಗಳನ್ನು ಒಪ್ಪುವುದಿಲ್ಲ ಎಂದು ಹೇಳಿ ಅಪರಾಧಿಗಳ ಹಿನ್ನೆಲೆ ಪರಿಗಣಿಸಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಕೊಪ್ಪಳ ಎಸ್ಪಿ ಹೇಳಿದ್ದಿಷ್ಟು
ವೆಂಕಟೇಶ ಕುರುಬರ್ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ ಸಂಬಂಧ ಕೊಪ್ಪಳ ಎಸ್ಪಿ ರಾಮ್ ಎಲ್ ಅರಸಿದ್ದಿ ಪ್ರತಿಕ್ರಿಯಿಸಿದ್ದಾರೆ. ವೆಂಕಟೇಶ ಕುರುಬರ್ ಕೊಲೆ ಕೇಸ್‌ನಲ್ಲಿ ಗಂಗಾವತಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು, ಇಂದು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕಟವಾಗಿದೆ. ಈ ಕೇಸ್ ಸಾಕಷ್ಟು ಸವಾಲಿನದ್ದಾಗಿತ್ತು, ಪೊಲೀಸರು ಪ್ರಕರಣಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ತಿಳಿಸಿದ್ದಾರೆ. ಇಬ್ಬರೂ ಜೊತೆಯಲ್ಲಿದ್ದವರು ನಂತರ ವೈಷಮ್ಯದಿಂದ ಬೇರ್ಪಟ್ಟಿದ್ದರು ಎಂದು ಅವರು ಹೇಳಿದರು.
ಎ1 ಆರೋಪಿ ರವಿ ಮೇಲೆ 17 ಪ್ರಕರಣಗಳು ದಾಖಲಾಗಿದ್ದವು, ಗಂಗಾಧರ ಮೇಲೆ 4 ಪ್ರಕರಣಗಳು ಸೇರಿದಂತೆ ಎಲ್ಲರ ಮೇಲೂ ಪ್ರಕರಣಗಳಿವೆ. ರವಿ ನಡೆದುಕೊಂಡ ರೀತಿಯನ್ನು ಕೋರ್ಟ್ ಸೂಕ್ಷ್ಮವಾಗಿ ಗಮನಿಸಿದೆ, ಅವರ ವರ್ತನೆಯಿಂದಲೂ ಅಪರಾಧ ಸ್ವರೂಪ ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಗಂಗಾವತಿ ನಗರದ ಹೊರವಲಯದಲ್ಲಿರುವ ರಾಣಾ ಪ್ರತಾಪ್ ಸಿಂಗ್ ವೃತ್ತದ ಬಳಿಯ ಖಾಸಗಿ ಆಸ್ಪತ್ರೆಯ ಬಳಿ 2025ರ ಅಕ್ಟೋಬರ್ 8ರ ಮಧ್ಯರಾತ್ರಿ ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ (32) ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಅ.8ರ ತಡರಾತ್ರಿ ಊಟ ಮುಗಿಸಿಕೊಂಡು ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ವೆಂಕಟೇಶ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಹಿಂಬಾಲಿಸಿದ ಯುವಕರ ಗುಂಪು ದ್ವಿಚಕ್ರ ವಾಹನಕ್ಕೆ ಗುದ್ದಿ ಕೆಳಗೆ ಬೀಳಿಸಿತ್ತು. ನಂತರ ಕೆಳಗೆ ಬಿದ್ದ ವೆಂಕಟೇಶನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದರು. ತೀವ್ರ ಗಾಯಗೊಂಡ ವೆಂಕಟೇಶನನ್ನು ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಗಂಗಾವತಿ ನಗರ ಪೊಲೀಸರು 12 ಜನರನ್ನು ಬಂಧಿಸಿ ಸುಮಾರು 927 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಹಳೆಯ ದ್ವೇಷ ಹಾಗೂ ಮಾರುತಿ ಎಂಬ ವ್ಯಕ್ತಿಯ ಚಿಕಿತ್ಸೆಗೆ ನೆರವಾದುದು ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.