ಬಳ್ಳಾರಿ: ತಾಯಿಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಅಪ್ರಾಪ್ತ ಬಾಲಕಿಗೆ ಔಷಧಿ ನೀಡುವ ನೆಪದಲ್ಲಿ ಸರ್ಕಾರಿ ಆಸ್ಪತ್ರೆಯ ಡಿ-ಗ್ರೂಪ್ ನೌಕರ ದುಷ್ಕೃತ್ಯ ಎಸಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಯ ಡಿ-ಗ್ರೂಪ್ ನೌಕರ ಅಜಯ್ ಮದಕರಿ (37) ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಅವನು ನೀಚ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಬಾಲಕಿಯ ತಾಯಿ ನೀಡಿದ ದೂರು ದಾಖಲಿಸಿಕೊಂಡು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕಿತ್ಸೆಗೆಂದು ಅಪ್ರಾಪ್ತ ಬಾಲಕಿ ತನ್ನ ತಾಯಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದ ಸಂದರ್ಭದಲ್ಲಿ ಆರೋಪಿ ಬಾಲಕಿಯನ್ನು ಪುಸಲಾಯಿಸಿ ತನ್ನ ಕ್ವಾಟ್ರಸ್‌ಗೆ ಕರೆದೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲಿ ಔಷಧಿ ನೀಡುವ ನೆಪದಲ್ಲಿ ಆಕೆಗೆ ಹಾನಿಕಾರಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸದ್ಯ ಈ ಘಟನೆ ಸಂಬಂಧ ಹೊಸಪೇಟೆ ಬಡಾವಣೆ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.