ಘಟಪ್ರಭಾ,ಸೆ,೨೯ : ಶ್ರೀ ಜೆ. ಜಿ. ಸಹಕಾರಿ ಆಸ್ಪತ್ರೆ ಸೊಸೈಟಿಯ ಸಹಕಾರ ಮಹರ್ಷಿ ಶ್ರೀ ಬಿ.ಎ. ಪಾಟೀಲ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ೨೦೨೦-೨೧ ನೇ ಸಾಲಿನ ಬಿ. ಎ. ಎಮ್. ಎಸ್. ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭ ಸೆ. ೨೮ ರಂದು ಕಾಲೇಜಿನ ತೆರೆದ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಂಸ್ಥೆಯ ವೃತ್ತೀಪರ ನಿರ್ದೇಶಕರು ಹಾಗೂ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಪರಮ ಪೂಜ್ಯ ಶ್ರೀಮನ್ ನಿರಂಜನ ಪ್ರಣವ ಸ್ವರೂಪ ಡಾ|| ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳು ವಹಿಸಿದ್ದರು, ಸಂಸ್ಥೆಯ ಚೇರಮನರಾದ ಶ್ರೀ ಎ. ಎಸ್. ಬಡಕುಂದ್ರಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮತ್ತು ಮುಖ್ಯ ಅತಿಥಿಗಳಾಗಿ ತೈಲ ಮತ್ತು ನೈಸರ್ಗಿಕ ಅನಿಲ ನಿಗi ಗೋವಾ ವಲಯದ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಶ್ರೀ ಸಾಕೆತ್ ಗುಪ್ತಾರವರು ಆಗಮಿಸಿ ಪದವೀಧರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು & ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ|| ಬಿ.ಕೆ.ಎಚ್.ಪಾಟೀಲ, ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ|| ಜೆ.ಕೆ. ಸರ್ಮಾ ಮತ್ತು ನಿಸರ್ಗೋಪಚಾರ ಕಾಲೇಜಿನ ಪ್ರಾಂಶುಪಾಲರಾದ ಡಾ|| ರಾಜು ಜಾಮಗೌಡರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀಮನ್ ನಿರಂಜನ ಪ್ರಣವ ಸ್ವರೂಪ ಡಾ|| ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳು ಮಾತನಾಡಿ ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಸಮಾಜದ ಆರೋಗ್ಯ ಸೇವೆಗೆ ಸಮರ್ಪಿಸಿಕೊಳ್ಳಬೇಕು ಎಂದು ಹೇಳಿದರು. ಮತ್ತು ಸಮಾರಂಭದ ಅತಿಥಿಯಾದ ಶ್ರೀ ಸಾಕೆತ್ ಗುಪ್ತಾರವರು ವೈದ್ಯ ವೃತ್ತಿಯಲ್ಲಿ ಸೇವಾ ಮನೋಭಾವ, ಕರ್ತವ್ಯನಿಷ್ಠೆ, ನೈತಿಕತೆ ಹಾಗೂ ರೋಗಿಗಳ ಬಗ್ಗೆ ಕರುಣೆ ಅತ್ಯಂತ ಮುಖ್ಯವಾಗಿದ್ದು, ಆಯುರ್ವೇದದ ಮಹತ್ವವನ್ನು ವಿಶ್ವದಾದ್ಯಂತ ಪಸರಿಸುವ ಜವಾಬ್ದಾರಿಯುವ ವೈದ್ಯರ ಮೇಲಿದೆ ಎಂದು ತಿಳಿಸಿದರು.
ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಿ ಅಭಿನಂದಿಸಲಾಯಿತು. ತಮ್ಮ ಶೈಕ್ಷಣಿಕ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೆಮ್ಮೆ ಮತ್ತು ಭವಿಷ್ಯದ ವೈದ್ಯಕೀಯ ಸೇವೆಯ ಬಗ್ಗೆ ಹೊಸ ಉತ್ಸಾಹ ಮೂಡಿಸುವ ಮೂಲಕಯಶಸ್ವಿಯಾಗಿ ಸಂಪನ್ನಗೊಂಡಿತು.