E-PAPER
21 Nov 2026, 03:24:49 AM|
Gold₹12977/gGold24K ₹12,977/g - 22K ₹11,885/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಳ್ಳಿಗಳ ಅಭಿವೃದ್ಧಿಗೆ 16 ಸಾವಿರ ಕೋಟಿ ರೂ.ಗಳ ನೆರವು : ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶಗಳ ಚಿತ್ರಣ ಬದಲಿಸಲು ನಮ್ಮ ಸರಕಾರ 16ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳನ್ನು ರೂಪಿಸಿದೆ. ‘ಸಿಎಂ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ’ ಅಡಿ ಸುಮಾರು 15ಸಾವಿರ ಕಿಮೀ ರಸ್ತೆ ಅಭಿವೃದ್ಧಿಗೆ 10ಸಾವಿರ ಕೋಟಿ ರೂ., 6ಸಾವಿರ ಕೋಟಿ ರೂ. ಗಳನ್ನು ಪಂಚಾಯಿತಿ ಮಟ್ಟದ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ‘ಸಿಎಂ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ’ ಹಾಗೂ ‘ಸಿಎಂ ಗ್ರಾಮೀಣಾಭಿವೃದ್ಧಿ ಯೋಜನೆ'ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಷ್ಟು ಬೃಹತ್ ಮೊತ್ತದ ಅನುದಾನ ನೀಡಿರುವುದು ಗುತ್ತಿಗೆದಾರರ ಉದ್ದಾರಕ್ಕೆ, ಜೇಬು ತುಂಬಿಸಲಿಕ್ಕೆ ಅಲ್ಲ, ಗ್ರಾಮೀಣ ಜನರ ಬದುಕು ಬದಲಾಯಿಸಲು ನೀಡಲಾಗುತ್ತಿದೆ. ಈ ಅನುದಾನದಲ್ಲಿ ಒಂದು ರೂಪಾಯಿಯೂ ದುರುಪಯೋಗವಾಗಬಾರದು. ಕಾಮಗಾರಿಗಳಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟ ಕಡ್ಡಾಯ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರತಿಯೊಂದು ಕಾಮಗಾರಿ ಆರಂಭಿಸುವ ಮೊದಲು ಸ್ಥಳದ ವಿಡಿಯೊ-ಛಾಯಾಚಿತ್ರಗಳನ್ನು ತೆಗೆದು ಕಡತದಲ್ಲಿ ದಾಖಲಿಸಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕದ ಚಿತ್ರಗಳನ್ನೂ ಸಂಗ್ರಹಿಸಬೇಕು. ಕಾಮಗಾರಿ ನಡೆಯುವ ಸ್ಥಳದ ನಿಖರ ನಿರ್ದೇಶಾಂಕಗಳನ್ನು ದಾಖಲಿಸಬೇಕು. ಟೆಂಡರ್ ಇಲ್ಲದೆ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ. ಕಾಮಗಾರಿಗಳ ಪ್ರಗತಿಯನ್ನು ಸಿಎಂ ಡ್ಯಾಶ್ ಬೋರ್ಡ್ ಮೂಲಕ ಪರಿಶೀಲಿಸಲಾಗುವುದು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಚಿತ್ರಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು. ಪ್ರತಿ ಪಂಚಾಯಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ವಾಟ್ಸ್‌ ಅಪ್ ಗುಂಪು ರಚಿಸಿ ಕಾಮಗಾರಿಗಳ ವಿವರಗಳನ್ನು ಹಂಚಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ರಸ್ತೆ ಚೆನ್ನಾಗಿದ್ದರೂ ಮತ್ತೆ ಅದೇ ರಸ್ತೆಗೆ ಹಣ ಖರ್ಚು ಮಾಡುವುದು, ಕಾಮಗಾರಿ ಮಾಡದೆ ಬಿಲ್ ಪಡೆಯುವುದು, ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಣ ದುರುಪಯೋಗ ಮಾಡುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಅಕ್ರಮಗಳಿಗೆ ಇನ್ನು ಅವಕಾಶವಿಲ್ಲ ಎಂದು ಶಿವಕುಮಾರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

15ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿ: ಸಿಎಂ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಸುಮಾರು 15ಸಾವಿರ ಕಿಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಲು 10ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ರಸ್ತೆ ಮರು ಡಾಂಬರೀಕರಣ, ಜಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ ಸಹಿತ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪ್ರತಿ ಕಿ.ಮೀ.ನ ಕಾಮಗಾರಿಯ ಸ್ವರೂಪಕ್ಕೆ ಅನುಗುಣವಾಗಿ 38ರಿಂದ 70 ಲಕ್ಷ ರೂ.ವೆಚ್ಚವನ್ನು ಅಂದಾಜು ಮಾಡಲಾಗಿದೆ. ಈಗಾಗಲೇ ಪ್ರಗತಿ ಪಥ ಯೋಜನೆಯಡಿ 5ಸಾವಿರ ಕೋಟಿ ರೂ.ಅನುದಾನ ನೀಡಲಾಗಿದೆ ಎಂದು ಶಿವಕುಮಾರ್ ಹೇಳಿದರು.

6 ಸಾವಿರ ಕೋಟಿ ರೂ.ಗಳನ್ನು ಪಂಚಾಯಿತಿ ಮಟ್ಟದ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಚರಂಡಿ, ಕುಡಿಯುವ ನೀರು ಹಾಗೂ ಅಗತ್ಯ ಮೂಲಸೌಕರ್ಯಗಳಿಗೆ ಈ ಹಣ ಬಳಕೆಯಾಗಲಿದೆ. ಯಾವ ಪಂಚಾಯಿತಿಯಲ್ಲಿ ಯಾವ ಕಾಮಗಾರಿ ಅಗತ್ಯವಿದೆ ಎಂಬುದನ್ನು ಗುರುತಿಸಿ, ಜಿಲ್ಲಾಧಿಕಾರಿಗಳ ಅನುಮತಿ ಮೂಲಕ ಅನುದಾನ ಬಿಡುಗಡೆ ಮಾಡಲಾಗುವುದು. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಅನುದಾನ ನೀಡಲಾಗುತ್ತಿದ್ದು, ಇದೊಂದು ದಾಖಲೆ ಎಂದು ಅವರು ಹೇಳಿದರು.

5 ಲಕ್ಷ ನಿವೇಶನ ಹಂಚಿಕೆ: ರಾಜ್ಯದಲ್ಲಿ 15ಲಕ್ಷ ನಿವೇಶನಗಳನ್ನು ಹಂಚಿಕೆಯ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ 5ಲಕ್ಷ ನಿವೇಶನಗಳನ್ನು ವಿತರಿಸಲು ನಿರ್ಧರಿಸಿದ್ದು, ಇದಕ್ಕಾಗಿ 9 ಸಾವಿರ ಎಕರೆ ಜಮೀನು ಗುರುತಿಸಲಾಗಿದೆ. ನಿವೇಶನಗಳ ಅಭಿವೃದ್ಧಿಗೆ ಅಗತ್ಯವಿರುವ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳ ವೆಚ್ಚವನ್ನು ವಾಸ್ತವಿಕವಾಗಿ ಪರಿಶೀಲಿಸಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಬಡವರಿಗೂ ನಿವೇಶನ: ಇನ್ನು ಮುಂದೆ ಬಡವರಿಗೆ ನೀಡುವ ನಿವೇಶನಗಳ ಅಳತೆಯನ್ನು ಕನಿಷ್ಠ 30x40 ಅಡಿಗೆ ನಿಗದಿಪಡಿಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ಹಿಂದೆ 20x30 ಅಡಿ ನಿವೇಶನ ನೀಡಲಾಗುತ್ತಿತ್ತು. ಆದರೆ ಕುಟುಂಬ ಬೆಳೆದಂತೆ ಮನೆ ಕಟ್ಟಲು ಜಾಗ ಸಾಲುವುದಿಲ್ಲ. ಮತ್ತೆ ಹೊಸ ಕೊಳಚೆ ಪ್ರದೇಶಗಳು ಸೃಷ್ಟಿಯಾಗಬಾರದು.

ಬಡವರ ಮಕ್ಕಳು ಭವಿಷ್ಯದಲ್ಲಿ ಉತ್ತಮ ಮನೆ ಕಟ್ಟಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ 30x40 ಅಡಿ ನಿವೇಶನ ನೀಡಲು ನಿರ್ಧರಿಸಲಾಗಿದೆ. ಅಗತ್ಯವಿದ್ದರೆ ನಿವೇಶನಗಳ ಸಂಖ್ಯೆಯನ್ನು ಕಡಿಮೆ ಮಾಡಿ ದೊಡ್ಡ ನಿವೇಶನ ನೀಡಲಾಗುವುದು. ಮನೆ ಇಲ್ಲದ ಕುಟುಂಬಗಳಿಗೆ ನಿವೇಶನ ನೀಡುವ ವೇಳೆ ಆದ್ಯತೆ ನೀಡಬೇಕು. ಈಗಾಗಲೇ ಮನೆ ಅಥವಾ ನಿವೇಶನ ಹೊಂದಿರುವವರಿಗೆ ಮತ್ತೊಮ್ಮೆ ಸೌಲಭ್ಯ ಕಲ್ಪಿಸಬಾರದು ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ವಲಸೆ ತಡೆಯಲು ಹಳ್ಳಿಗಳ ಅಭಿವೃದ್ಧಿ: ಗಾಂಧೀಜಿ, ‘ಭಾರತದ ಆತ್ಮ ಹಳ್ಳಿಗಳಲ್ಲಿ ಇದೆ’ ಎಂದಿದ್ದರು. ಹಳ್ಳಿಗಳು ಅಭಿವೃದ್ಧಿಯಾದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬುದು ನಮ್ಮ ನಂಬಿಕೆ. ನಾನೂ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಗ್ರಾಮೀಣ ಜನರ ಸಮಸ್ಯೆಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅನುದಾನದ ಕೊರತೆಯಿಂದ ಎದುರಿಸುವ ಸಂಕಷ್ಟಗಳ ಅರಿವು ನನಗಿದೆ. ಹೀಗಾಗಿ ಪಂಚಾಯಿತಿಗಳಿಗೆ ಆರ್ಥಿಕ ಶಕ್ತಿ ನೀಡುವ ಉದ್ದೇಶದಿಂದ ದೊಡ್ಡ ಮೊತ್ತದ ಅನುದಾನ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ: ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಹಳ್ಳಿಗಳಲ್ಲಿ ಉದ್ಯಮ ಸ್ಥಾಪಿಸಲು ಮುಂದೆ ಬರುವವರಿಗೆ ಪಂಚಾಯಿತಿಗಳು ಅನಗತ್ಯ ತೊಂದರೆ ನೀಡಬಾರದು. ಕರಾವಳಿ ಮತ್ತು ಮಲೆನಾಡು ಭಾಗಗಳ ಅಭಿವೃದ್ಧಿಗೂ ವಿಶೇಷ ನೀತಿ ರೂಪಿಸಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.

ನಗರಗಳ ಅಭಿವೃದ್ಧಿಯಷ್ಟೇ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯೂ ಮುಖ್ಯ. ಸರಕಾರಿ ಕಚೇರಿಗಳು ಮತ್ತು ಪಂಚಾಯಿತಿಗಳು ಜನರ ಕಷ್ಟ ಪರಿಹರಿಸುವ ಕೇಂದ್ರಗಳಾಗಬೇಕು. ರಸ್ತೆ, ಕುಡಿಯುವ ನೀರು, ನಿವೇಶನ, ಖಾತಾ ಸೇರಿದಂತೆ ಜನರ ಮೂಲಭೂತ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು. 16ಸಾವಿರ ಕೋಟಿ ಗ್ರಾಮೀಣ ಜನರ ಬದುಕು ಬದಲಿಸುವುದಕ್ಕಾಗಿ. ಅಧಿಕಾರಿಗಳು ಇದನ್ನು ತಮ್ಮ ಕರ್ತವ್ಯವೆಂದು ಭಾವಿಸಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಒತ್ತಡಕ್ಕೆ ಅವಕಾಶವಿಲ್ಲ: ಸಿಇಒಗಳು, ಇಒಗಳು, ಪಿಡಿಒಗಳು ಹಾಗೂ ಇತರ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಶಾಸಕರು ಅಥವಾ ಸಚಿವರಿಂದ ಅನಗತ್ಯ ಒತ್ತಡ ಬಂದರೆ ಅದನ್ನು ಗೌಪ್ಯವಾಗಿ ಜಿಲ್ಲಾಧಿಕಾರಿ ಅಥವಾ ಸಿಇಒಗಳ ಮೂಲಕ ಸರಕಾರಕ್ಕೆ ತಿಳಿಸಬಹುದು. ಅಧಿಕಾರಿಗಳು ಯಾರ ಭಯಕ್ಕೂ ಒಳಗಾಗದೆ ಕಾನೂನು ಬದ್ಧವಾಗಿ ಕೆಲಸ ಮಾಡಬೇಕು. ಜಾತಿಗಿಂತ ನೀತಿ, ಪ್ರಾಮಾಣಿಕತೆ ಮತ್ತು ಗುಣಮಟ್ಟಕ್ಕೆ ಸರಕಾರ ಆದ್ಯತೆ ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಈಶ್ವರ್ ಖಂಡ್ರೆ, ಬಸವಂತಪ್ಪ, ರಾಜ್ಯ ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಕೋನರೆಡ್ಡಿ, ರಹೀಂ ಖಾನ್, ಅಶೋಕ್ ಪಟ್ಟಣ್, ವೆಂಕಟ ಶಿವಾರೆಡ್ಡಿ, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಆಯುಕ್ತೆ ಫೌಜಿಯಾ ತರನ್ನಮ್ ಸೇರಿದಂತೆ ಇನ್ನಿತರರು ಹಾಜರಿದ್ದರು.

 

‘ಸಚಿವರು ಪ್ರತಿ ತಿಂಗಳು ಎರಡು ಬಾರಿ ತಾಲೂಕುಗಳಿಗೆ ಭೇಟಿ ನೀಡಬೇಕು. ಶಾಸಕರು ಹೋಬಳಿ ಮತ್ತು ಪಂಚಾಯಿತಿ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಬೇಕು. ನಾನು ಪ್ರತಿ ಶನಿವಾರ ಒಂದೊಂದು ‘ಪ್ರಜಾಸೇವಾ ಕೇಂದ್ರ’ಕ್ಕೆ ಭೇಟಿ ನೀಡುತ್ತೇನೆ. ಜನರ ಅರ್ಜಿಗಳನ್ನು ಸ್ವೀಕರಿಸಿ ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು. ಅಧಿಕಾರಿಗಳ ಪ್ರತಿದಿನದ ಕಾರ್ಯಚಟುವಟಿಕೆಗಳೂ ಜನರಿಗೆ ತಿಳಿಯಬೇಕು’

-ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ

15 ತಿಂಗಳಲ್ಲಿ ರಸ್ತೆ ಕಾಮಗಾರಿ ಮುಗಿಸಬೇಕು: ‘ಸರಕಾರವು ಈಗಾಗಲೇ 15ಸಾವಿರ ಕಿ.ಮೀ. ರಸ್ತೆಯ ಅಭಿವೃದ್ಧಿಗೆ ಅನುಮೋದನೆ ನೀಡಿದ್ದು, ಜಿ.ಪಂ. ಸಿಇಓಗಳು ತಮ್ಮ ಹಂತದಲ್ಲೇ ವಿನ್ಯಾಸ, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಗುಣಮಟ್ಟದ ರಸ್ತೆಗಳನ್ನು ಮಾಡಿಸಬೇಕು. ಈ ಕಾಮಗಾರಿ 15 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡಬೇಕು. ರಸ್ತೆಗಳ ಗುಣಮಟ್ಟ ಕಾಪಾಡಿಕೊಳ್ಳಲು, ರಸ್ತೆ ಕಾಮಗಾರಿಗಳನ್ನು ಪ್ರಗತಿ ಹಂತದಲ್ಲಿ 2 ಬಾರಿ, ಪೂರ್ಣಗೊಂಡ ನಂತರ ಒಟ್ಟು 3 ಬಾರಿ ಪರಿವೀಕ್ಷಣೆ ಮಾಡಲಾಗುತ್ತದೆ’

-ಈಶ್ವರ್ ಖಂಡ್ರೆ ಗ್ರಾಮೀಣಾಭಿವೃದ್ಧಿ ಸಚಿವ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದುವೆಯಾಗಲು ಬಲವಂತಪಡಿಸಿದ ‘ಹುಚ್ಚು’ ಅಭಿಮಾನಿ; ಇನ್‌ ಫ್ಲುಯೆನ್ಸರ್ ಗಳ ಬಂಧುಗಳಿಂದ ಯುವಕನ ಥಳಿಸಿ ಹತ್ಯೆGujarat | ಖಾಸಗಿ ವಾಹನಗಳ ಮೇಲೆ ಜಾತಿ, ಸಮುದಾಯದ ಗುರುತು ಪ್ರದರ್ಶನ ನಿಷೇಧಿಸಿದ ಸರಕಾರವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣ | ರಾಜ್ಯ ಸಭಾ ಸದಸ್ಯ ಸತ್ನಾಮ್ ಸಂಧುಗೆ ED ಸಮನ್ಸ್Tamil Nadu | ವಿವಾದಾತ್ಮಕ ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿ ನ. 24ರಂದು ಒಂದು ಬಾರಿಗೆ ಕಾರ್ತಿಕೈ ದೀಪ ಬೆಳಗಲು ಸುಪ್ರೀಂ ಅನುಮತಿManipur | ಎನ್ಕೌಂಟರ್ ನಲ್ಲಿ ಓರ್ವ ಮೃತ್ಯು; 8 ಮಂದಿ ಬಂಡುಕೋರರ ಬಂಧನRajasthan | ಪಂಚಾಯತ್ ಚುನಾವಣೆ; ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಮುಖಭಂಗತಪ್ಪು ಮಾಹಿತಿ ನೀಡಿ ಫಾರ್ಮ್-7 ಸಲ್ಲಿಸಿದ ಆರೋಪ; ಸಿ.ಕೆ.ರಾಮಮೂರ್ತಿ ಸೇರಿ ನಾಲ್ವರ ವಿರುದ್ಧದ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಕಾರಭ್ರಷ್ಟಾಚಾರ, ಡ್ರಗ್ಸ್, ಆರ್ಥಿಕ ಅಪರಾಧ-ದ್ವೇಷ ಭಾಷಣದ ವಿರುದ್ಧ ಶೂನ್ಯ ಸಹಿಷ್ಣುತೆ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‘ದಿ ಫೈಲ್’ ಫೇಸ್ ಬುಕ್ ಪುಟ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ‘ಸಿಎಂ ಡ್ಯಾಶ್‍ಬೋರ್ಡ್’ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್