E-PAPER
21 Nov 2026, 03:24:45 AM|
Gold₹12977/gGold24K ₹12,977/g - 22K ₹11,885/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

‘ದಿ ಫೈಲ್’ ಫೇಸ್ ಬುಕ್ ಪುಟ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರು : ಕನ್ನಡದ ಸ್ವತಂತ್ರ ತನಿಖಾ ಸುದ್ದಿ ಜಾಲತಾಣ ‘ದಿ ಫೈಲ್’ನ ಅಧಿಕೃತ ಫೇಸ್‌ ಬುಕ್ ಪುಟವನ್ನು ಭಾರತದಲ್ಲಿ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ, ಅದರ ಮಾತೃಸಂಸ್ಥೆ ಫೈಲ್‌ ಸ್ಟಾಕ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಸಂಸ್ಥಾಪಕ ಸಂಪಾದಕ ಜಿ. ಮಹಂತೇಶ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಯಾವುದೇ ನೋಟಿಸ್, ಲಿಖಿತ ಆದೇಶ ಅಥವಾ ನಿರ್ಬಂಧಕ್ಕೆ ಕಾರಣಗಳನ್ನು ನೀಡದೆ ಇಡೀ ಸುದ್ದಿ ಪುಟವನ್ನು ಸ್ಥಗಿತಗೊಳಿಸಿರುವುದು ಕಾನೂನುಬಾಹಿರ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

2026ರ ನ.20ರಂದು ಸಂವಿಧಾನದ 226 ಮತ್ತು 227ನೇ ವಿಧಿಗಳ ಅಡಿಯಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯೋಜಿತ ಅಧಿಕಾರಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಕರ್ನಾಟಕ ರಾಜ್ಯ ಗೃಹ ಇಲಾಖೆ, ಅಮೆರಿಕದ ಮೆಟಾ ಪ್ಲಾಟ್‌ ಫಾರ್ಮ್ಸ್ ಇಂಕ್ ಹಾಗೂ ಮೆಟಾ ಪ್ಲಾಟ್‌ ಫಾರ್ಮ್ಸ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗಳನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ಫೈಲ್‌ ಸ್ಟಾಕ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಪರವಾಗಿ ವಕೀಲ ಗಿರೀಶ್ ಭಾರದ್ವಾಜ್ ಅರ್ಜಿ ಸಲ್ಲಿಸಿದ್ದಾರೆ.

2020ರ ಫೆಬ್ರವರಿ 25ರಂದು ಆರಂಭವಾದ ‘ದಿ ಫೈಲ್’ ಫೇಸ್‌ ಬುಕ್ ಪುಟವು ಕಳೆದ ಆರು ವರ್ಷಗಳಲ್ಲಿ 1,17,77,782 ವೀಕ್ಷಣೆಗಳನ್ನು ದಾಖಲಿಸಿದೆ. 2025ರ ಮೇ 19ರಿಂದ 2026ರ ನ.19ರವರೆಗಿನ ಅವಧಿಯಲ್ಲಿ 1,17,47,259 ವೀಕ್ಷಣೆಗಳನ್ನು ಪಡೆದಿದ್ದು, ಈ ಪೈಕಿ ಶೇ. 91.2ರಷ್ಟು ವೀಕ್ಷಣೆಗಳು ಪುಟವನ್ನು ಹಿಂಬಾಲಿಸದ ಸಾರ್ವಜನಿಕರಿಂದ ಬಂದಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ದಾಖಲೆ ಆಧಾರಿತ ತನಿಖಾ ಪತ್ರಿಕೋದ್ಯಮ ನಡೆಸುತ್ತಿರುವ ಸಂಸ್ಥೆಗೆ ಕಳೆದ ಮೂರು ವರ್ಷಗಳಿಂದ ಇಂಡಿಪೆಂಡೆಂಟ್ ಆ್ಯಂಡ್ ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ (IPSMF) ಬೆಂಬಲ ನೀಡುತ್ತಿದೆ. ಉಳಿದಂತೆ ಓದುಗರ ಚಂದಾ ಮತ್ತು ಸಣ್ಣ ದೇಣಿಗೆಗಳಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

2025ರ ಜೂ.17ರಂದು ಕಂಪೆನಿಗಳ ಕಾಯ್ದೆ 2013ರ ಅಡಿಯಲ್ಲಿ ನೋಂದಣಿಯಾದ ಫೈಲ್‌ ಸ್ಟಾಕ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಜಿ. ಮಹಂತೇಶ್, ಶಿವಯ್ಯ ಅನುಷ್ ಮತ್ತು ತಿಪ್ಪಣ್ಣ ರೂಪಾ ನಿರ್ದೇಶಕರಾಗಿದ್ದಾರೆ. 2026ರ ನ. 16ರಂದು ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಮಹಂತೇಶ್ ಅವರಿಗೆ ಅಧಿಕಾರ ನೀಡಲಾಗಿದೆ.

►ವರದಿಗಳ ಬಳಿಕ ಜೀವ ಬೆದರಿಕೆ

2026ರ ಸೆ. 8 ಮತ್ತು 9ರಂದು ಸಿದ್ದಾರ್ಥ ವಿಹಾರ ಟ್ರಸ್ಟ್‌ ಗೆ ಭೂಮಿ ಮಂಜೂರು ಮಾಡಿರುವ ಕುರಿತು ‘ದಿ ಫೈಲ್’ ತನಿಖಾ ವರದಿಗಳನ್ನು ಪ್ರಕಟಿಸಿತ್ತು. ಇದಾದ ಬಳಿಕ ಸೆ. 9ರಂದು ಸಂಜೆ 6ರಿಂದ ರಾತ್ರಿ 9.37ರ ನಡುವೆ 9xxxxxxx3 ಸಂಖ್ಯೆಯಿಂದ ವಾಟ್ಸಾಪ್ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಸಂಪಾದಕ ಮಹಂತೇಶ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ವರದಿಗಳನ್ನು ತೆಗೆದುಹಾಕದಿದ್ದರೆ ಹಲ್ಲೆ ನಡೆಸುವುದಾಗಿ ಜೀವ ಬೆದರಿಕೆ ಹಾಕಿದ್ದನು.

ಈ ಕುರಿತು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ 2026ರ ಸೆ. 10ರಂದು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 352 ಮತ್ತು 351(3)ರ ಅಡಿಯಲ್ಲಿ ಅಪರಾಧ ಸಂಖ್ಯೆ 364/2026ರಂತೆ FIR ದಾಖಲಾಗಿತ್ತು.

ಈ ಘಟನೆಯ ಬಳಿಕ 2026ರ ಅ. 26ರಂದು ಭಾರತದಲ್ಲಿ ‘ದಿ ಫೈಲ್’ ಫೇಸ್‌ ಬುಕ್ ಪುಟ ಏಕಾಏಕಿ ಲಭ್ಯವಿಲ್ಲದಂತಾಯಿತು. ಪುಟವನ್ನು ತೆರೆಯಲು ಪ್ರಯತ್ನಿಸಿದಾಗ ಕಾನೂನುಬದ್ಧ ಮನವಿಯ ಹಿನ್ನೆಲೆಯಲ್ಲಿ ವಿಷಯವನ್ನು ನಿರ್ಬಂಧಿಸಲಾಗಿದೆ ಎಂಬ ಸಂದೇಶ ಕಾಣಿಸಿಕೊಂಡಿತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

►ಮೆಟಾಗೆ ಮನವಿ ಸಲ್ಲಿಸಿದರೂ ಸ್ಪಂದನೆಯಿಲ್ಲ

ನಿರ್ಬಂಧದ ಕುರಿತು ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಮೆಟಾದಿಂದ ಪೂರ್ವಭಾವಿ ನೋಟಿಸ್ ಬಂದಿರಲಿಲ್ಲ. ಹೀಗಾಗಿ ಅ. 27ರಂದು ಸಂಜೆ 7.27ಕ್ಕೆ ಫೈಲ್ ಸ್ಟಾಕ್ ತಂಡವು ಮೆಟಾ ಅಧಿಕಾರಿಗಳಿಗೆ ಇಮೇಲ್ ಮೂಲಕ ಮನವಿ ಸಲ್ಲಿಸಿ, ಪುಟವನ್ನು ತಕ್ಷಣ ಮರುಸ್ಥಾಪಿಸುವಂತೆ ಕೋರಿತ್ತು.

ನಿರ್ಬಂಧಕ್ಕೆ ಕಾರಣವಾದ ಕಾನೂನು ಮನವಿ, ದೂರು ನೀಡಿದ ಪ್ರಾಧಿಕಾರ ಮತ್ತು ನಿರ್ದಿಷ್ಟ ಪೋಸ್ಟ್ ಗಳ ವಿವರಗಳನ್ನು ಬಹಿರಂಗಪಡಿಸುವಂತೆಯೂ ಮನವಿ ಮಾಡಲಾಗಿತ್ತು. ಆದರೆ ಮೆಟಾದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ನ. 5ರಂದು ಸಂಪಾದಕ ಮಹಂತೇಶ್ ಭದ್ರಾವತಿ ಅವರು ತಮ್ಮ ವೈಯಕ್ತಿಕ ಫೇಸ್‌ ಬುಕ್ ಖಾತೆಯಲ್ಲಿ, ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಪ್ರತಿ ವರ್ಷ ಅಗಾಧ ಪ್ರಮಾಣದ ಹಣ ಹೊಂದಿಸುವುದು ಕಷ್ಟಸಾಧ್ಯ ಎಂದು 2023ರಲ್ಲೇ ಆರ್ಥಿಕ ಇಲಾಖೆ ಎಚ್ಚರಿಸಿತ್ತು ಎಂಬ ‘ದಿ ಫೈಲ್’ ವರದಿಯನ್ನು ಹಂಚಿಕೊಂಡಿದ್ದರು. ಅದೇ ದಿನ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಆ ಪೋಸ್ಟ್ ಅನ್ನೂ ಭಾರತದಲ್ಲಿ ನಿರ್ಬಂಧಿಸಲಾಯಿತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

►ಕಾನೂನು ಪ್ರಕ್ರಿಯೆ ಪಾಲಿಸಿಲ್ಲ ಎಂಬ ವಾದ

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಮತ್ತು 2009ರ ನಿರ್ಬಂಧಿಸುವ ನಿಯಮಗಳ 8ನೇ ನಿಯಮದ ಪ್ರಕಾರ, ಯಾವುದೇ ಮಾಹಿತಿಯನ್ನು ನಿರ್ಬಂಧಿಸುವ ಮೊದಲು ಅದರ ಪ್ರಕಾಶಕರಿಗೆ ನೋಟಿಸ್ ನೀಡಿ ವಿವರಣೆ ಕೇಳುವುದು ಕಡ್ಡಾಯವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಸುದ್ದಿ ಪ್ರಕಾಶಕರಿಗೆ ಅನ್ವಯವಾಗುವ 2021ರ ಐಟಿ ನಿಯಮಗಳ ಭಾಗ-3ರ ನಿಯಮ 13ರಿಂದ 16ರ ಅಡಿಯಲ್ಲಿ ಅಂತರ್ ಇಲಾಖಾ ಸಮಿತಿಯ ಪರಿಶೀಲನೆ ಮತ್ತು ವಾರ್ತಾ ಹಾಗೂ ಪ್ರಸಾರ ಸಚಿವಾಲಯದ ಕಾರ್ಯದರ್ಶಿಯವರ ಅನುಮೋದನೆ ಅಗತ್ಯವಿರುತ್ತದೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

2025ರ ನ. 15ರಿಂದ ಜಾರಿಗೆ ಬಂದ ತಿದ್ದುಪಡಿ ನಿಯಮ 3(1)(ಡಿ) ಪ್ರಕಾರ ನಿರ್ದಿಷ್ಟ URL ಉಲ್ಲೇಖಿಸಿ ಲಿಖಿತ ಹಾಗೂ ಕಾರಣಸಹಿತ ಆದೇಶ ನೀಡಬೇಕು. ಇಡೀ ಸುದ್ದಿ ಪುಟವನ್ನು ನಿರ್ಬಂಧಿಸುವಂತಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಆರು ವರ್ಷಗಳ ದಾಖಲೆಗಳನ್ನು ಒಳಗೊಂಡ ಇಡೀ ಸುದ್ದಿ ಪುಟವನ್ನು ಅನಿರ್ದಿಷ್ಟಾವಧಿಗೆ ನಿರ್ಬಂಧಿಸುವುದು ಮತ್ತು ಸಂಪಾದಕರ ವೈಯಕ್ತಿಕ ಖಾತೆಯ ಪೋಸ್ಟ್ ಗಳನ್ನೂ ಸ್ವಯಂಚಾಲಿತವಾಗಿ ತಡೆಯುವುದು ಸಂವಿಧಾನದ 14, 19(1)(ಎ), 19(1)(ಜಿ) ಮತ್ತು 21ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಕಾರಣ ನೀಡದೆ ನಿರ್ಬಂಧ ಮುಂದುವರಿಸುವುದರಿಂದ ಸ್ವತಂತ್ರ ಪತ್ರಿಕೋದ್ಯಮದ ಮೇಲೆ ಭೀತಿಯ ವಾತಾವರಣ ನಿರ್ಮಾಣವಾಗುತ್ತದೆ. ದೀರ್ಘಕಾಲದ ನಿರ್ಬಂಧದಿಂದ ಆರು ವರ್ಷಗಳ ಸುದ್ದಿ ಆರ್ಕೈವ್ಸ್ ಮತ್ತು ಓದುಗರ ಬಳಗ ಶಾಶ್ವತವಾಗಿ ಅಳಿಸಿಹೋಗುವ ಅಪಾಯವಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ನಿರ್ಬಂಧವನ್ನು ರದ್ದುಗೊಳಿಸಿ, ‘ದಿ ಫೈಲ್’ ಫೇಸ್‌ ಬುಕ್ ಪುಟ ಹಾಗೂ ನ. 5ರಂದು ನಿರ್ಬಂಧಿಸಲಾದ ವೈಯಕ್ತಿಕ ಪೋಸ್ಟ್ ಅನ್ನು ತಕ್ಷಣ ಮರುಸ್ಥಾಪಿಸಲು ಮಧ್ಯಂತರ ಮತ್ತು ಅಂತಿಮ ಆದೇಶ ನೀಡುವಂತೆ ಕರ್ನಾಟಕ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದುವೆಯಾಗಲು ಬಲವಂತಪಡಿಸಿದ ‘ಹುಚ್ಚು’ ಅಭಿಮಾನಿ; ಇನ್‌ ಫ್ಲುಯೆನ್ಸರ್ ಗಳ ಬಂಧುಗಳಿಂದ ಯುವಕನ ಥಳಿಸಿ ಹತ್ಯೆGujarat | ಖಾಸಗಿ ವಾಹನಗಳ ಮೇಲೆ ಜಾತಿ, ಸಮುದಾಯದ ಗುರುತು ಪ್ರದರ್ಶನ ನಿಷೇಧಿಸಿದ ಸರಕಾರವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣ | ರಾಜ್ಯ ಸಭಾ ಸದಸ್ಯ ಸತ್ನಾಮ್ ಸಂಧುಗೆ ED ಸಮನ್ಸ್Tamil Nadu | ವಿವಾದಾತ್ಮಕ ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿ ನ. 24ರಂದು ಒಂದು ಬಾರಿಗೆ ಕಾರ್ತಿಕೈ ದೀಪ ಬೆಳಗಲು ಸುಪ್ರೀಂ ಅನುಮತಿManipur | ಎನ್ಕೌಂಟರ್ ನಲ್ಲಿ ಓರ್ವ ಮೃತ್ಯು; 8 ಮಂದಿ ಬಂಡುಕೋರರ ಬಂಧನRajasthan | ಪಂಚಾಯತ್ ಚುನಾವಣೆ; ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಮುಖಭಂಗತಪ್ಪು ಮಾಹಿತಿ ನೀಡಿ ಫಾರ್ಮ್-7 ಸಲ್ಲಿಸಿದ ಆರೋಪ; ಸಿ.ಕೆ.ರಾಮಮೂರ್ತಿ ಸೇರಿ ನಾಲ್ವರ ವಿರುದ್ಧದ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಕಾರಭ್ರಷ್ಟಾಚಾರ, ಡ್ರಗ್ಸ್, ಆರ್ಥಿಕ ಅಪರಾಧ-ದ್ವೇಷ ಭಾಷಣದ ವಿರುದ್ಧ ಶೂನ್ಯ ಸಹಿಷ್ಣುತೆ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‘ದಿ ಫೈಲ್’ ಫೇಸ್ ಬುಕ್ ಪುಟ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ‘ಸಿಎಂ ಡ್ಯಾಶ್‍ಬೋರ್ಡ್’ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್