ನೆಲಮಂಗಲ: ದಪ್ಪ ಆಗಿದ್ದೀಯಾ, ನಿನಗೆ ಮಗು ಆಗಲ್ಲ ಎಂದು ಗಂಡ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದರಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಮೃತರನ್ನು ಶಿವಲೀಲಾ ಎಂದು ಗುರುತಿಸಲಾಗಿದೆ. ಪ್ರೀತಿಸಿ ಮದುವೆಯಾದ ಬಳಿಕ ದಾಂಪತ್ಯ ಜೀವನದಲ್ಲಿ ಉಂಟಾದ ಕಲಹವೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ಪೋಷಕರ ವಿರೋಧದ ನಡುವೆಯೂ ಲಕ್ಷ್ಮಣ ಎಂಬಾತನನ್ನು ಪ್ರೀತಿಸಿ ಶಿವಲೀಲಾ ವಿವಾಹವಾಗಿದ್ದರು. ಸುಮಾರು 6 ವರ್ಷಗಳ ಹಿಂದೆ ಕಲಬುರಗಿಯಿಂದ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ ವೇಳೆ ಇವರಿಬ್ಬರ ನಡುವೆ ಪರಿಚಯವಾಗಿ ಪ್ರೀತಿ ಬೆಳೆಯಿತು ಎಂದು ತಿಳಿದುಬಂದಿದೆ. ನಂತರ 4 ವರ್ಷಗಳ ಹಿಂದೆ ಕುಟುಂಬದ ವಿರೋಧದ ನಡುವೆಯೂ ಇಬ್ಬರೂ ಮದುವೆಯಾಗಿದ್ದರು.
ಮದುವೆಯ ನಂತರ ‘ನಿನಗೆ ಮಕ್ಕಳು ಆಗಲ್ಲ’ ಎಂಬ ಕಾರಣ ನೀಡಿ ಲಕ್ಷ್ಮಣ ನಿರಂತರವಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ. ಜೊತೆಗೆ ದೈಹಿಕವಾಗಿ ಅವಮಾನಿಸುವುದು ಹಾಗೂ ಕುಡಿದು ಬಂದು ಜಗಳ ಮಾಡುವುದು ಸಾಮಾನ್ಯವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಜೊತೆಯಾಗಿ ವರದಕ್ಷಿಣೆ ತರುವಂತೆ ಪೀಡನೆ ಕೂಡ ನಡೆಯುತ್ತಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ. ದಂಪತಿ ಇಬ್ಬರೂ ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಗಂಡನ ಕಿರುಕುಳವನ್ನು ತಾಳಲಾರದೆ ಕಳೆದ ರಾತ್ರಿ ಶಿವಲೀಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಈ ಸಂಬಂಧ ಮೃತಳ ಪೋಷಕರು ಲಕ್ಷ್ಮಣ ವಿರುದ್ಧ ದೂರು ದಾಖಲಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.