ಕೋಲ್ಕತ್ತಾ: ಆರ್‌ಜಿ ಕರ್ ಅತ್ಯಾಚಾರ-ಹತ್ಯೆ ಪ್ರಕರಣದ ಸಂತ್ರಸ್ತೆಯ ತಾಯಿ ಹಾಗೂ ಬಿಜೆಪಿ ಶಾಸಕಿ ರತ್ನಾ ದೇಬ್‌ನಾಥ್ ಅವರು ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿಯನ್ನು ಭೇಟಿ ಮಾಡಿ, ಬಳಿಕ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸೋಲಿನ ವಿಚಾರವನ್ನೂ ಅವರು ಉಲ್ಲೇಖಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ರಾಜ್ಯ ಸಚಿವಾಲಯದ 14ನೇ ಮಹಡಿಯಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದೆ ಎಂದು ತಿಳಿಸಿದ್ದಾರೆ.
2024ರ ಆಗಸ್ಟ್ 8 ಮತ್ತು 9ರ ಮಧ್ಯರಾತ್ರಿ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಕರ್ತವ್ಯದಲ್ಲಿದ್ದ 31 ವರ್ಷದ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಸಾಕ್ಷ್ಯ ನಾಶ ಹಾಗೂ ಘಟನೆಯನ್ನು ಮುಚ್ಚಿಹಾಕಲು ಯತ್ನ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಭಾರೀ ಸೋಲು ಕಂಡ ಬಳಿಕ, ಬಿಜೆಪಿ ಸರ್ಕಾರ ಪ್ರಕರಣದ ತನಿಖೆಯನ್ನು ವೇಗಗೊಳಿಸಿ ನ್ಯಾಯ ಒದಗಿಸುವುದಾಗಿ ಘೋಷಿಸಿದೆ. Xನಲ್ಲಿ ಪೋಸ್ಟ್ ಮಾಡಿರುವ ದೇಬ್‌ನಾಥ್, “ಇಂದು ನಾನು ನಬನ್ನಾದ 14ನೇ ಮಹಡಿಯಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿಯಾಗಿದ್ದೇನೆ. ಅವರು ಪ್ರಾಮಾಣಿಕ ನಾಯಕತ್ವದ ಶಕ್ತಿ ಹೊಂದಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡಲು ತಾಳ್ಮೆ ಅಗತ್ಯ. ಇಂದು ನಾನು ನನ್ನ ಏಕೈಕ ಮಗಳನ್ನು ಕಳೆದುಕೊಂಡ ನೋವಿನಲ್ಲಿ ಇದ್ದರೆ, ಮಮತಾ ಬ್ಯಾನರ್ಜಿ ತಮ್ಮ ಅಧಿಕಾರದ ಕುರ್ಚಿಯನ್ನು ಕಳೆದುಕೊಂಡಿದ್ದಾರೆ” ಎಂದು ಹೇಳಿದ್ದಾರೆ.
“ಮಾಜಿ ಮುಖ್ಯಮಂತ್ರಿ ಹಾಗೂ ಅವರ ತಂಡ ಇನ್ನೂ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕಾದು ನೋಡಿ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಶಾಸಕಿಯಾಗಿರಬಹುದು. ಆದರೆ ನನ್ನ ಬದುಕಿನ ಎಲ್ಲ ಸಂತೋಷ ಕಳೆದುಹೋಗಿದೆ. ನನ್ನ ಮಗಳಿಗೆ ನ್ಯಾಯ ದೊರಕಿಸುವುದೇ ಈಗ ನನ್ನ ಏಕೈಕ ಗುರಿ. ನಾನು ಮುಖ್ಯಮಂತ್ರಿಗೆ ನೀಡಿರುವ ಹೆಸರುಗಳನ್ನು ಈಗಾಗಲೇ ತನಿಖಾಧಿಕಾರಿಗಳಿಗೂ ನೀಡಲಾಗಿತ್ತು” ಎಂದು ಹೇಳಿದರು.
ಪ್ರಕರಣದ ತನಿಖೆ ಮತ್ತು ನಿರ್ವಹಣೆ ಕುರಿತು ದೇಬ್‌ನಾಥ್ ಹಾಗೂ ಅವರ ಪತಿ ಈ ಹಿಂದೆಯೂ ಟಿಎಂಸಿ ಸರ್ಕಾರ ಮತ್ತು ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇತ್ತೀಚಿನ ಚುನಾವಣಾ ಪ್ರಚಾರದ ವೇಳೆ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ಕೂಡ ಸಲ್ಲಿಕೆಯಾಗಿತ್ತು.
ಆರ್‌ಜಿ ಕರ್ ಪ್ರಕರಣದ ವೇಳೆ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಐಪಿಎಸ್ ಅಧಿಕಾರಿಗಳಾದ ವಿನೀತ್ ಗೋಯಲ್, ಇಂದಿರಾ ಮುಖರ್ಜಿ ಮತ್ತು ಅಭಿಷೇಕ್ ಗುಪ್ತಾ ವಿರುದ್ಧ ಇಲಾಖಾ ತನಿಖೆಗೆ ಸುವೇಂದು ಅಧಿಕಾರಿ ಆದೇಶಿಸಿದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರನ್ನು ಅಮಾನತುಗೊಳಿಸಲಾಗಿದೆ.