ಕೊಪ್ಪಳ,ಅ,೦೧: ಸಂಸದೀಯ ನಡಾವಳಿಗಳು, ಸಂವಿಧಾನಿಕ ಮೌಲ್ಯಗಳು ಹಾಗೂ ಶಾಸಕಾಂಗದ ಕಾರ್ಯವೈಖರಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ಹಮ್ಮಿಕೊಂಡಿರುವ ‘ಯುವ ಸಂಸತ್ ಕಾರ್ಯಕ್ರಮವನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಯಶಸ್ವಿಯಾಗಿ ಆಯೋಜಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಸೂಚನೆ ನೀಡಿದರು.
ಬುಧವಾರದಂದು ಗೂಗಲ್ ಮೀಟ್ ಮೂಲಕ ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಕೀಲರು, ನ್ಯಾಯಾಧೀಶರೊಂದಿಗೆ ಹಮ್ಮಿಕೊಂಡಿದ್ದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ತಾಲೂಕು ಮಟ್ಟದ ಸಮಿತಿಯಲ್ಲಿ ಅಗತ್ಯವಿದ್ದಲ್ಲಿ ತಹಶೀಲ್ದಾರರು ಸಂವಿಧಾನದ ಬಗ್ಗೆ ಪರಿಣಿತರಿರುವ ಇಬ್ಬರು ಕಾಲೇಜು ಉಪನ್ಯಾಸಕರನ್ನು ಸಮಿತಿಗೆ ಸೇರ್ಪಡೆ ಮಾಡಿಕೊಳ್ಳಬಹುದು. ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳಿಂದ ತಲಾ ೫೦ ವಿದ್ಯಾರ್ಥಿಗಳನ್ನು ಯುವ ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಬೇಕು. ೫೦ ವಿದ್ಯಾರ್ಥಿಗಳ ತಂಡದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಶೇ.೮ ರಿಂದ ೧೦, ಪದವಿಪೂರ್ವ ವಿದ್ಯಾರ್ಥಿಗಳು ಶೇ.೧೦ ರಿಂದ ೧೫, ಪದವಿ ವಿದ್ಯಾರ್ಥಿಗಳು ಶೇ.೫೦ ರಿಂದ ೬೦ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಶೇ.೨೦ ರಿಂದ ೩೦ ರಷ್ಟಿರಬೇಕು. ಸಮಿತಿಯು ತೀರ್ಮಾನಿಸಿದ ಮಾನದಂಡಕ್ಕೆ ಅನುಗುಣವಾಗಿ ಮೇಲ್ಕಂಡ ಅನುಪಾತದ ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ತಮ್ಮ ಹಂತದಲ್ಲಿಯೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನನು ಆಯ್ಕೆ ಮಾಡುವಾಗ ಕಲೆ, ವಾಣಿಜ್ಯ, ವಿಜ್ಞಾನ, ಕಾನೂನು, ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲಾ ಕೋರ್ಸಿನ ವಿದ್ಯಾರ್ಥಿಗಳು ಒಳಗೊಳ್ಳುವಂತೆ ಕ್ರಮ ವಹಿಸಬೇಕು. ತಾಲ್ಲೂಕು ಕೇಂದ್ರಗಳಲ್ಲಿ ಸ್ನಾತಕೋತ್ತರ ಕೇಂದ್ರಗಳು ಇಲ್ಲದಿದ್ದರೆ, ಆ ಸ್ನಾತಕೋತ್ತರ ವಿಭಾಗಕ್ಕೆ ನಿಗದಿಪಡಿಸಿದ ವಿದ್ಯಾರ್ಥಿಗಳ ಅನುಪಾತವನ್ನು ಪದವಿ ವರ್ಗಕ್ಕೆ ವರ್ಗಾಯಿಸಿಕೊಳ್ಳಬೇಕು. ಸಂಪೂರ್ಣ ಕಾರ್ಯಕ್ರಮವನ್ನು ಅಧಿಕಾರಿಗಳು ಮತ್ತು ಶಾಲಾ-ಕಾಲೇಜುಗಳ ಪ್ರಾಂಶುಪಾಲರ ನೇತೃತ್ವದಲ್ಲಿಯೇ ನಡೆಸಬೇಕು. ಆಯ್ಕೆಯಾಗುವ ಒಟ್ಟು ವಿದ್ಯಾರ್ಥಿಗಳಲ್ಲಿ ಶೇಕಡಾ ೫೦ ರಷ್ಟು ಹುಡುಗಿಯರು ಹಾಗೂ ಶೇಕಡಾ ೫೦ ರಷ್ಟು ಹುಡುಗರಿಗೆ ಕಡ್ಡಾಯವಾಗಿ ಅವಕಾಶ ನೀಡಬೇಕು ಎಂದು ಸೂಚಿಸಿದರು.
ತಾಲೂಕಿನ ಸಮುದಾಯ ಭವನ ಅಥವಾ ಕಲ್ಯಾಣ ಮಂಟಪಗಳಲ್ಲಿ ವಿಧಾನಸಭೆ/ಸಂಸತ್ತಿನ ಮಾದರಿಯಲ್ಲಿ ಸ್ಪೀಕರ್ ಪೀಠ, ಉಪಸಭಾಪತಿ ಆಸನ, ಪ್ರೇಕ್ಷಕರ ಗ್ಯಾಲರಿ ಮತ್ತು ಮಾಧ್ಯಮ ಗ್ಯಾಲರಿಗಳ ವ್ಯವಸ್ಥೆ ಮಾಡಬೇಕು. ಚರ್ಚೆಗೆ ತಾಲೂಕಿಗೆ ಸಂಬಂಧಿಸಿದ ೩ ಸ್ಥಳೀಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿವಾದಾಸ್ಪದ ವಿಷಯಗಳನ್ನು ಚರ್ಚೆಗೆ ಎತ್ತಿಕೊಳ್ಳಬಾರದು. ಯುವ ಸಂಸತ್ತು ಸಭೆಯನ್ನು ಅಕ್ಟೋಬರ್ ೧೦ ರೊಳಗೆ ಹಮ್ಮಿಕೊಳ್ಳಬೇಕು ಎಂದು ಅವರು ತಿಳಿಸಿದರು.
ತಾಲೂಕುಗಳಿಂದ ಆಯ್ಕೆಯಾದ ಅಭ್ಯರ್ಥಿಗಳೊಂದಿಗೆ ಅಕ್ಟೋಬರ್ ೧೧ ರಿಂದ ಅಕ್ಟೋಬರ್ ೩೦, ೨೦೨೬ ರ ನಡುವೆ ಜಿಲ್ಲಾ ಮಟ್ಟದ ಯುವ ಸಂಸತ್‌ನ್ನು ಆಯೋಜಿಸಲಾಗುವುದು. ಜಿಲ್ಲಾ ಮಟ್ಟದ ಯುವ ಸಂಸತ್‌ನಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ ಒಬ್ಬೊಬ್ಬರಂತೆ (ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳಿಂದ ೫ ಅತ್ಯುತ್ತಮ ವಿದ್ಯಾರ್ಥಿಗಳನ್ನು) ರಾಜ್ಯ ಮಟ್ಟದ ಯುವ ಸಂಸತ್‌ಗೆ ಆಯ್ಕೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ವಾದ-ಮಂಡನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಪ್ರಶಸ್ತಿ/ಸನ್ಮಾನ ನೀಡಿ ಗೌರವಿಸಲಾಗುವುದು. ಅಧಿಕಾರಿಗಳು ಶಾಲಾ-ಕಾಲೇಜುಗಳಿಗೆ ವ್ಯಾಪಕ ಪ್ರಚಾರ ನೀಡಿ, ವಿದ್ಯಾರ್ಥಿಗಳಿಗೆ ಸಂವಿಧಾನ ಮತ್ತು ಸಂಸದೀಯ ಕಾರ್ಯವಿಧಾನದ ಕುರಿತು ವಕೀಲರ ಸಂಘ ಹಾಗೂ ರಾಜಕೀಯ ವಿಷಯ ಉಪನ್ಯಾಸಕರ ನೆರವಿನಿಂದ ಸೂಕ್ತ ತರಬೇತಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ಮಾತನಾಡಿ, ನವೆಂಬರ್ ೨೬ ರ ಸಂವಿಧಾನ ದಿನಾಚರಣೆಯಂದು ಎಲ್ಲಾ ೨೨೪ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ೨೨೪ ವಿದ್ಯಾರ್ಥಿಗಳನ್ನು ಒಳಗೊಂಡ ರಾಜ್ಯ ಮಟ್ಟದ ಯುವ ಸಂಸತ್ ಸಭೆಯನ್ನು ರಾಜ್ಯ ವಕೀಲರ ಸಂಘದ ಅಹಯೋಗದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು ಎಂದು ಯುವ ಸಂಸತ್ ರಚನೆಯ ಹಂತಗಳ ಕುರಿತು ವಿವರಿಸಿದರು.
ವಿಡಿಯೋ ಸಂವಾದದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾಧೀಶರು ಸೇರಿದಂತೆ ಇತರರು ಭಾಗವಹಿಸಿದ್ದರು.