ತಾಳಿಕೋಟೆ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಹಣಕಾಸಿನ ಜಾಗೃತಿ ಮೂಡಿಸುವುದರೊಂದಿಗೆ ಸುರಕ್ಷಿತ ಹೂಡಿಕೆ ಮಾರ್ಗಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಇಲ್ಲಿನ ಎಸ್.ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಲ್.ಕ್ಯೂ.ಎ.ಸಿ. ಅಡಿಯಲ್ಲಿ ವಾಣಿಜ್ಯ ಹಾಗೂ ಅರ್ಥಶಾಸ್ತ್ರ ವಿಭಾಗಗಳು ಮತ್ತು ಮುಂಬೈನ ಕ್ರೀಷಾ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಪ್ರಕಾಶ ವಡವಡಗಿ ಭಾಗವಹಿಸಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಹೂಡಿಕೆ ಅವಕಾಶಗಳು, ಅಪಾಯ ನಿರ್ವಹಣೆ ಹಾಗೂ ಸೈಬರ್ ಮತ್ತು ಆನ್ಲೈನ್ ಹೂಡಿಕೆ ವಂಚನೆಗಳ ಕುರಿತು ಮಾಹಿತಿ ನೀಡಿದರು. ಮ್ಯೂಚುವಲ್ ಫಂಡ್ಗಳಲ್ಲಿ ಸಣ್ಣ ಮೊತ್ತದಿಂದ ಹೂಡಿಕೆ ಆರಂಭಿಸಿ ದೀರ್ಘಾವಧಿಯಲ್ಲಿ ಲಾಭ ಪಡೆಯುವ ವಿಧಾನ ಹಾಗೂ ಅವುಗಳ ಕಾರ್ಯವಿಧಾನದ ಕುರಿತು ಅವರು ವಿವರಿಸಿದರು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಅನುಸರಿಸಬೇಕಾದ ಮೂಲಭೂತ ನಿಯಮಗಳು, ಕಂಪನಿಗಳ ಕಾರ್ಯವೈಖರಿಯ ವಿಶ್ಲೇಷಣೆ ಹಾಗೂ ಸೂಕ್ತ ಹೂಡಿಕೆ ತಂತ್ರಗಳ ಬಗ್ಗೆಯೂ ತಿಳಿಸಿಕೊಟ್ಟರು.
ಅನಧಿಕೃತ ಹಾಗೂ ಶೀಘ್ರ ಲಾಭದ ಆಮಿಷವೊಡ್ಡುವ ಹೂಡಿಕೆ ಯೋಜನೆಗಳಿಂದ ದೂರವಿದ್ದು, ಆನ್ಲೈನ್ ಹಣಕಾಸು ವಂಚನೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಯಿತು. ಸುರಕ್ಷಿತ ಸರ್ಕಾರಿ ಹೂಡಿಕೆ ಯೋಜನೆಗಳು, ತುರ್ತು ನಿಧಿ, ಟರ್ಮ್ ಇನ್ಶೂರೆನ್ಸ್ ಹಾಗೂ ಪಿಪಿಎಫ್ನಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮಹತ್ವವನ್ನು ತಿಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಡಿ.ಬಿ. ಮೂಗಡ್ಲಿಮಠ ವಹಿಸಿದ್ದರು. ಶ್ರೀ ರಮೇಶ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಡಾ. ದೀಪಾ ಮಾಳಗೆ ಸ್ವಾಗತಿಸಿದರು. ಕುಮಾರಿ ಕೌಸಲ್ಯ ಕೂಚಬಾಳ ಹಾಗೂ ಕುಮಾರಿ ಕಾವೇರಿ ಹಂದಿಗನೂರು ನಿರೂಪಿಸಿದರು. ಡಾ. ಅಶೋಕ ರಾಠೋಡ ವಂದಿಸಿದರು.