ಧಾರವಾಡ: ಸಿವಿಲ್ ಎಂಜಿನಿಯರ್, ನೀರಾವರಿ ತಜ್ಞ ಹಾಗೂ ದಕ್ಷ ಆಡಳಿತಗಾರರಾಗಿದ್ದ ದಿವಂಗತ ವಿಠಲರಾವ್ ವೈಕುಂಠರಾವ್ ದೇಶಪಾಂಡೆ ಅವರ ಜನ್ಮಶತಮಾನೋತ್ಸವವನ್ನು ಅ. 24ರಂದು ಸಂಜೆ 4ಕ್ಕೆ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಚಿಕ್ಕ ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಅಭಿವೃದ್ಧಿ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ವಿ.ವಿ. ದೇಶಪಾಂಡೆ ಅವರು ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ತಾಂತ್ರಿಕ ಶ್ರೇಷ್ಠತೆ, ಆಡಳಿತಾತ್ಮಕ ದಕ್ಷತೆ, ಪ್ರಾಮಾಣಿಕತೆ ಹಾಗೂ ಸಾರ್ವಜನಿಕ ಸೇವೆಯ ಬದ್ಧತೆಯನ್ನು ಮೈಗೂಡಿಸಿಕೊಂಡಿದ್ದ ಅವರ ಜೀವನ ಮತ್ತು ಸಾಧನೆಗಳು ಮುಂದಿನ ಪೀಳಿಗೆಯ ಎಂಜಿನಿಯರ್‌ಗಳು ಹಾಗೂ ಸಾರ್ವಜನಿಕ ಸೇವಕರಿಗೆ ಪ್ರೇರಣೆಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲೋಕೋಪಯೋಗಿ ಇಲಾಖೆಯ ಮಾಜಿ ಕಾರ್ಯದರ್ಶಿ ಜಿ.ಸಿ. ತಲ್ಲೂರು ಹಾಗೂ ಮುಂಬೈನ ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಪದ್ಮಶ್ರೀ ಡಾ. ರಮಣ್ ದೇಶಪಾಂಡೆ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇದೆ ವೇಳೆ ಹಿರಿಯ ಎಂಜಿನಿಯರ್‌ಗಳಾದ ಜಿ.ಸಿ. ತಲ್ಲೂರು, ರಾಜಮನೆ ಬಿ.ಟಿ., ಪಿ.ಕೆ. ಜುಂಜರವಾಡ, ಎಸ್.ಎಸ್. ಬೆಳ್ಳುಂಕೆ, ವಿ.ಎಸ್. ಚಲಗೇರಿ ಹಾಗೂ ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಗುವುದು. ಅದರಂತೆ ವಿ.ವಿ. ದೇಶಪಾಂಡೆ ಅವರ ಸ್ಮರಣಾರ್ಥ ನೀಡಲಾಗುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಎಂಜಿನಿಯರ್ ಎಂ.ಬಿ. ಪರಪ್ಪ ಗೌಡರ್ ಅವರಿಗೆ ಹಾಗೂ ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಶ್ರೇಷ್ಠತೆ ಪ್ರಶಸ್ತಿಯನ್ನು ಜಗದೀಶ ನಂದಿ ಅವರಿಗೆ ಪ್ರದಾನ ಮಾಡಲಾಗುವುದು. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಯರು ಹಾಗೂ ಸಾಧಕರನ್ನು ಗೌರವಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.
ವಿ.ವಿ. ದೇಶಪಾಂಡೆ ಅವರ ಕುಟುಂಬ ಜೀವನ, ಪ್ರಾಥಮಿಕ ಶಿಕ್ಷಣ ಹಾಗೂ ವೃತ್ತಿಜೀವನವನ್ನು ಪರಿಚಯಿಸುವ ದೃಶ್ಯ-ಶ್ರವ್ಯ ಪ್ರಸ್ತುತಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರಲಿದೆ. ಅವರೊಂದಿಗೆ ಒಡನಾಟ ಹೊಂದಿದ್ದವರ ನೆನಪುಗಳು ಹಾಗೂ ಗಣ್ಯರ ನುಡಿನಮನಗಳ ಮೂಲಕ ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಸ್ಮರಿಸಲಾಗುವುದು. ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಕುಲಕರ್ಣಿ ಕಟ್ಟಿ ಅವರಿಂದ ‘ಸ್ಮರ ನಮನ’ ಸಂಗೀತ ಪ್ರಸ್ತುತಿಯೂ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿದ್ದು ಪಾಟೀಲ್, ಕೆ.ಎಲ್. ಪಾಟೀಲ್, ಎ.ಸಿ. ತಹಸೀಲ್ದಾರ್, ಡಾ. ಕವನ ದೇಶಪಾಂಡೆ, ದೃಷ್ಟಿ ದೇಶಪಾಂಡೆ, ಅರುಣ್ ಇದ್ದರು.