ಬೆಂಗಳೂರು: ಲೋಕಸಭೆಯಲ್ಲಿ ನಿನ್ನೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆ ಸೋಲನುಭವಿಸಿದೆ. ಈ ಮಸೂದೆ ಮೂಲಕ ಲೋಕಸಭಾ ಸ್ಥಾನಗಳನ್ನು 543ರಿಂದ 850ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇತ್ತು. ಮಸೂದೆ ಅಂಗೀಕಾರವಾಗಲು ಎರಡರ ಮೂರನೇ ಭಾಗದ ಮತಗಳ ಅಗತ್ಯವಿತ್ತು. ಆದರೆ ಎನ್‌ಡಿಎ ಸರ್ಕಾರದ ಈ ಮಹತ್ವಾಕಾಂಕ್ಷಿ ಪ್ರಯತ್ನವನ್ನು ಇಂಡಿಯಾ ಮೈತ್ರಿಕೂಟ ತಡೆದಿದೆ.
ಚಲಾವಣೆಯಾದ ಒಟ್ಟು 489 ಮತಗಳಲ್ಲಿ 278 ಮತಗಳು ಪರವಾಗಿ, 211 ಮತಗಳು ವಿರುದ್ಧವಾಗಿ ಬಂದಿದ್ದು, ಅಗತ್ಯವಿದ್ದ ಮತಗಳಿಗಿಂತ 71 ಮತಗಳ ಕೊರತೆಯಿಂದ ಮಸೂದೆ ಸೋತಿದೆ. ಈ ಬೆಳವಣಿಗೆಯನ್ನು ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳು ಸ್ವಾಗತಿಸಿ ಸಂಭ್ರಮಿಸಿವೆ. ಮಸೂದೆ ಅಂಗೀಕಾರವಾದರೆ ದಕ್ಷಿಣ ರಾಜ್ಯಗಳ ಪ್ರಭಾವ ಕೇಂದ್ರ ಸರ್ಕಾರದ ರಚನೆಯಲ್ಲಿ ಕುಗ್ಗುತ್ತದೆ ಎಂಬ ಆತಂಕವೇ ಇದಕ್ಕೆ ಕಾರಣವಾಗಿದೆ.
ಆದರೆ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ನೀಡುತ್ತಿರುವ ಜೆಡಿಎಸ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಮಸೂದೆಗೆ ಬೆಂಬಲ ವ್ಯಕ್ತಪಡಿಸಿವೆ. ಬಿಜೆಪಿ ಸಂಸದರೂ ಸಾಮಾನ್ಯವಾಗಿ ಮಸೂದೆ ಪರವಾಗಿಯೇ ಮತ ಚಲಾಯಿಸಿದ್ದಾರೆ. ಅದೇ ರೀತಿಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಸಂಸದ ಡಾ. ಸಿ.ಎನ್. ಮಂಜುನಾಥ್ ಕೂಡ ಮಸೂದೆ ಪರ ಮತ ಹಾಕಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕನ್ನಡಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ‘ಹೃದಯವಂತ’ ವೈದ್ಯನೆಂದು ನಂಬಿ ಗೆಲ್ಲಿಸಿದ್ದ ವ್ಯಕ್ತಿ ಈಗ ಕರ್ನಾಟಕದ ಹಿತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.