ಕುಕನೂರು : ಕುದುರೆಮೋತಿ,ನೆಲಜೇರಿ,ವಟಪರವಿ,ಮ್ಯಾದನೇರಿ, ಹಾಗೂ ಭೈರನಾಯಕನಹಳ್ಳಿ ಗ್ರಾಮಗಳ ವಿದ್ಯುತ್ ಗ್ರಾಹಕರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳುವಂತೆ ಜೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಜೆಸ್ಕಾಂ ಮಂಗಳೂರು ಶಾಖೆಯ ಶಾಖಾಧಿಕಾರಿ ಶರಣಪ್ಪ ಎಸ್. ಗುಂಡೂರು ಅವರು, ಈ ಪಟ್ಟಿಯಲ್ಲಿ ನಮೂದಿಸಿರುವ ಆರ್.ಆರ್. ಸಂಖ್ಯೆಯ ಗ್ರಾಹಕರು ಇದುವರೆಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಗೃಹಜ್ಯೋತಿ ಯೋಜನೆಯಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕಳೆದ ಮೂರು ತಿಂಗಳಿಂದ ನಡೆಯುತ್ತಿದ್ದು, ಪಟ್ಟಿಯಲ್ಲಿರುವ ಕೆಲವು ಗ್ರಾಹಕರು ಇನ್ನೂ ನೋಂದಣಿ ಮಾಡಿಕೊಂಡಿಲ್ಲ. ಆದ್ದರಿಂದ ಸಂಬಂಧಪಟ್ಟ ಗ್ರಾಹಕರು ತಮ್ಮ ಅಗತ್ಯ ದಾಖಲೆಗಳನ್ನು ಗ್ರಾಮ ವಿದ್ಯುತ್ ಪ್ರತಿನಿಧಿ ಅಥವಾ ಜೆಸ್ಕಾಂ ಸಿಬ್ಬಂದಿಗೆ ನೀಡಿ, ಕೂಡಲೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಗ್ರಾಹಕರು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸದೆ ಇರುವ ಕಾರಣದಿಂದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ದೊರೆಯದಿದ್ದಲ್ಲಿ, ಅದಕ್ಕೆ ಜೆಸ್ಕಾಂ ಇಲಾಖೆ ಅಥವಾ ಕಂಪನಿಯು ಜವಾಬ್ದಾರಿಯಾಗುವುದಿಲ್ಲ ಎಂದು ಶರಣಪ್ಪ ಎಸ್. ಗುಂಡೂರು ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ ಕುದುರೆಮೋತಿ,ನೆಲಜೇರಿ, ವಟಪರವಿ, ಮ್ಯಾದನೇರಿ ಹಾಗೂ ಭೈರನಾಯಕನಹಳ್ಳಿ ಗ್ರಾಮದ ಪಟ್ಟಿಯಲ್ಲಿರುವ ಎಲ್ಲಾ ಗ್ರಾಹಕರು ಯಾವುದೇ ವಿಳಂಬ ಮಾಡದೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.