ಹಂಪಿ: ಕನ್ನಡ ವಿಶ್ವವಿದ್ಯಾಲಯದಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿಗೆ ಕಳೆದ ಹಲವು ತಿಂಗಳುಗಳಿAದ ವೇತನ ಪಾವತಿಯಾಗದೆ ತೀವ್ರ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಬಾಕಿ ವೇತನ ಬಿಡುಗಡೆ ಮಾಡುವಂತೆ ಜನಪ್ರತಿನಿಧಿಗಳು ಹಾಗೂ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ೧೦-೧೫ ವರ್ಷಗಳಿಂದ ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿಯಾಗಿ ೧೫-೨೦ ವರ್ಷಗಳಿಂದ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ವೇತನ ಭಾಗ್ಯವಿಲ್ಲದಂತಾಗಿದೆ. ಅತಿಥಿ ಉಪನ್ಯಾಸಕರಿಗೆ ಕಳೆದ ೧೧ ತಿಂಗಳ ಹಿಂದಿನ ಬಾಕಿ ಹಾಗೂ ಪ್ರಸ್ತುತ ಸಾಲಿನ ೪ ತಿಂಗಳು ಸೇರಿ ಒಟ್ಟು ೧೫ ತಿಂಗಳ ವೇತನ ಬರಬೇಕಿದೆ. ಅದೇ ರೀತಿ, ತಾತ್ಕಾಲಿಕ ಆಡಳಿತ ಸಿಬ್ಬಂದಿಗೆ ೭ ತಿಂಗಳ ಹಿಂದಿನ ಬಾಕಿ ಹಾಗೂ ೪ ತಿಂಗಳ ಪ್ರಸ್ತುತ ವೇತನ ಸೇರಿ ಒಟ್ಟು ೧೧ ತಿಂಗಳಿನಿAದ ವೇತನ ಪಾವತಿಯಾಗಿಲ್ಲ.
ದೀರ್ಘಾವಧಿಯಿಂದ ವೇತನ ಸಿಗದಿರುವುದರಿಂದ ಕುಟುಂಬ ನಿರ್ವಹಣೆ, ಮನೆ ಬಾಡಿಗೆ, ವೈದ್ಯಕೀಯ ವೆಚ್ಚ ಹಾಗೂ ಮಕ್ಕಳ ಶಿಕ್ಷಣದ ವೆಚ್ಚಗಳನ್ನು ಭರಿಸಲಾಗದೆ ನೌಕರರು ಪರದಾಡುವಂತಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ವಿಶೇಷ ಅನುದಾನಕ್ಕೆ ಮನವಿ:
ಸಮಸ್ಯೆಯ ತೀವ್ರತೆಯನ್ನು ಪರಿಗಣಿಸಿ, ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರುವಂತೆ ಹಾಗೂ ಈ ಕುರಿತು ದಿನಾಂಕ ೦೨.೦೯.೨೦೨೬ರಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ವಿಜಯನಗರ ಶಾಸಕ ಹೆಚ್.ಆರ್. ಗವಿಯಪ್ಪ ಮತ್ತು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಗಿದೆ.
ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಎದುರಾಗದಂತೆ ಆಯ-ವ್ಯಯದಲ್ಲಿ ಪ್ರತ್ಯೇಕ ಆರ್ಥಿಕ ಹಂಚಿಕೆ ಹಾಗೂ ನಿಯತಕಾಲಿಕ ವೇತನ ಅನುದಾನ ಕಲ್ಪಿಸುವಂತೆ ಶೈಕ್ಷಣಿಕ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿಗಳು ಜನಪ್ರತಿನಿಧಿಗಳಿಗೆ ವಿನಂತಿಸಿದೆ.
ನೇತಾರರ ಸಕಾರಾತ್ಮಕ ಸ್ಪಂದನೆ:
ಸಿಬ್ಬಂದಿಯ ಅಹವಾಲು ಆಲಿಸಿದ ಉನ್ನತ ಶಿಕ್ಷಣ ಸಚಿವರು ಹಾಗೂ ಶಾಸಕರು, ಈ ಗಂಭೀರ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ವಿಶೇಷ ಅನುದಾನ ಬಿಡುಗಡೆಗೊಳಿಸಲು ಶ್ರಮಿಸುವುದಾಗಿ ಹಾಗೂ ಶೀಘ್ರವೇ ವೇತನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.