ಬೆಂಗಳೂರು: ಕೇರಳದಲ್ಲಿ ನಾಯಕತ್ವ ಗೊಂದಲಕ್ಕೆ ತೆರೆ ಎಳೆದ ಕಾಂಗ್ರೆಸ್ ಹೈಕಮಾಂಡ್‌ಗೆ ಇದೀಗ ಕರ್ನಾಟಕದ ರಾಜಕೀಯ ಸಮತೋಲನವೇ ದೊಡ್ಡ ತಲೆನೋವಾಗುತ್ತಿದೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜನ್ಮದಿನವಾದ ಮೇ 15ರಂದು ಮುಖ್ಯಮಂತ್ರಿ ಪಟ್ಟ ಘೋಷಣೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಕಾದಿದ್ದರು. ಆದರೆ, ಯಾವುದೇ ಬೆಳವಣಿಗೆ ಆಗದ ಹಿನ್ನೆಲೆ ಬೆಂಬಲಿಗರಲ್ಲಿ ಅಸಮಾಧಾನ ಹೆಚ್ಚಾಗಿದೆ.
ಕಳೆದ ನವೆಂಬರ್‌ನಲ್ಲೇ ನಾಯಕತ್ವ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆದಿದ್ದವು. ಆ ವೇಳೆ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾದ ಗೊಂದಲವನ್ನು ಹೈಕಮಾಂಡ್ ತಾತ್ಕಾಲಿಕವಾಗಿ ನಿಯಂತ್ರಿಸಲು ಮಾತ್ರ ಸಾಧ್ಯವಾಗಿತ್ತು.
ಈಗ ಕೇರಳದ ಬೆಳವಣಿಗೆಗಳು ತಣ್ಣಗಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕತ್ವದ ಗಮನ ಕರ್ನಾಟಕದತ್ತ ಕೇಂದ್ರೀಕೃತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಅಧಿಕಾರದ ಪೈಪೋಟಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಸಂಪುಟ ಪುನರ್ ರಚನೆ ಹಾಗೂ ಖಾಲಿ ಸಚಿವ ಸ್ಥಾನಗಳ ಭರ್ತಿಗೆ ಒತ್ತು ನೀಡುತ್ತಿದ್ದರೆ, ಶಿವಕುಮಾರ್ ಮುಖ್ಯಮಂತ್ರಿಯಾಗುವ ಆಸೆಯನ್ನು ಮುಂದುವರಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ತಮ್ಮ ಆಡಳಿತಾತ್ಮಕ ಮತ್ತು ಶಾಸಕಾಂಗ ಹಿಡಿತವನ್ನು ಮತ್ತಷ್ಟು ಬಲಪಡಿಸಿದರೆ, ಸಂಪುಟ ಪುನರ್ ರಚನೆ ಡಿಕೆಶಿ ಅವರ ರಾಜಕೀಯ ಲೆಕ್ಕಾಚಾರಕ್ಕೆ ಹೊಡೆತ ನೀಡುವ ಸಾಧ್ಯತೆ ಇದೆ.
ಇನ್ನೊಂದೆಡೆ ಸಿದ್ದರಾಮಯ್ಯ ಬಣ ತಾಳ್ಮೆಯ ರಾಜಕಾರಣ ಮುಂದುವರಿಸುತ್ತಿದೆ ಎನ್ನಲಾಗುತ್ತಿದೆ. ಆದರೆ, ಶಿವಕುಮಾರ್ ಬಣ ಮಾತ್ರ ಅಧಿಕಾರ ಹಂಚಿಕೆ ಒಪ್ಪಂದದ ವಿಚಾರವನ್ನು ಹೈಕಮಾಂಡ್ ಮುಂದೆ ಮತ್ತೆ ಮತ್ತೆ ಪ್ರಸ್ತಾಪಿಸುತ್ತಿದೆ. ಇದೇ ಸಮಯದಲ್ಲಿ ಸಚಿವ ಸ್ಥಾನಗಳ ನಿರೀಕ್ಷೆಯಲ್ಲಿರುವ ಹಲವು ಶಾಸಕರು ಪಕ್ಷದ ಕೇಂದ್ರ ನಾಯಕತ್ವದ ಮೇಲೆ ಒತ್ತಡ ಹೆಚ್ಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದ ಸ್ಥಿರತೆ ಹಾಗೂ ಪಕ್ಷದ ಏಕತೆಯನ್ನು ಕಾಪಾಡಲು ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ರಾಜಕೀಯ ಚಟುವಟಿಕೆಗಳ ಮೇಲೆ ನಿಗಾ ಇಡುವ ಸಾಧ್ಯತೆ ಇದೆ. ಕೆಪಿಸಿಸಿ ಕಚೇರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಡಿಕೆ ಶಿವಕುಮಾರ್ ಅವರಿಗೆ ಶುಭಾಶಯ ಕೋರಿ ಅಳವಡಿಸಿದ್ದ ಪೋಸ್ಟರ್‌ಗಳಲ್ಲಿ ಅವರನ್ನು “ಮುಂದಿನ ಮುಖ್ಯಮಂತ್ರಿ” ಎಂದು ಬಿಂಬಿಸಲಾಗಿದೆ. ಮೈಸೂರಿನಲ್ಲಿ ಸಹ ಅವರ ಬೆಂಬಲಿಗರು ಇದೇ ಘೋಷಣೆಯೊಂದಿಗೆ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ರಾಜ್ಯ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಹೈಕಮಾಂಡ್ ಚುರುಕುಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.