ಚನ್ನಮ್ಮನ ಕಿತ್ತೂರು: ಕಿತ್ತೂರು ಎಂದರೆ ಕೇವಲ ಒಂದು ಉತ್ಸವವಲ್ಲ. ಅದು ರಾಣಿ ಚನ್ನಮ್ಮನ ಶೌರ್ಯ, ಸ್ವಾಭಿಮಾನ, ಮಹಿಳಾ ಶಕ್ತಿ ಹಾಗೂ ಕನ್ನಡ ನಾಡಿನ ಹೆಮ್ಮೆಯನ್ನು ಪ್ರತಿಬಿಂಬಿಸುವ ಐತಿಹಾಸಿಕ ಸಂಭ್ರಮ. ಈ ಹಿಂದೆ ಕಿತ್ತೂರು ಉತ್ಸವದ ಉದ್ಘಾಟನೆಯನ್ನು ರಾಜಕೀಯ ಗಣ್ಯರಿಂದ ಮಾಡಿಸಿಕೊಂಡು ಬರಲಾಗುತ್ತಿತ್ತು. ಆದರೆ ಈ ಬಾರಿ ವಿಭಿನ್ನ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿರುವ ಒಬ್ಬ ಸಾಧಕಿಯ ಹೆಸರನ್ನು ಕಿತ್ತೂರು ಭಾಗದ ಜನತೆ ಮುನ್ನೆಲೆಗೆ ತಂದಿದ್ದಾರೆ.
ಅದು ವೈದ್ಯಕೀಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿರುವ, ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಛಾಪು ಮೂಡಿಸಿರುವ ಡಾ. ವಿಜಯಲಕ್ಷ್ಮೀ ಐ. ಬಾಳೇಕುಂದ್ರಿ ಅವರ ಹೆಸರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಈ ಬಾರಿ ವಿಶೇಷ ಸಾಧನೆ ಮಾಡಿರುವ ಮಹನೀಯರ ಅಮೃತ ಹಸ್ತದಿಂದ ಕಿತ್ತೂರು ಉತ್ಸವವನ್ನು ಉದ್ಘಾಟಿಸುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡುವ ಆಶಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ವಿಭಿನ್ನ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿರುವ ಗಣ್ಯರನ್ನು ಗುರುತಿಸುವ ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಡಾ. ವಿಜಯಲಕ್ಷ್ಮೀ ಐ. ಬಾಳೇಕುಂದ್ರಿ ಅವರ ಹೆಸರನ್ನು ಕಿತ್ತೂರು ಭಾಗದ ಜನತೆ ಮುನ್ನೆಲೆಗೆ ತಂದಿದ್ದಾರೆ.
೨೦೨೬ರ ಕಿತ್ತೂರು ಉತ್ಸವವನ್ನು ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿಸಬೇಕು ಎಂಬುದು ಕಿತ್ತೂರು ಭಾಗದ ಸಾರ್ವಜನಿಕರ ಒತ್ತಾಸೆಯಾಗಿದೆ.
ಹೃದಯ ಚಿಕಿತ್ಸಾ ಕ್ಷೇತ್ರದಲ್ಲಿ ಚಿನ್ನದ ಹೆಜ್ಜೆ
ಬೆಳಗಾವಿಯಲ್ಲಿ ಜನಿಸಿದ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು ವೈದ್ಯಕೀಯ ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡಿ, ಮಕ್ಕಳ ಹೃದಯರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಶ್ರೀ ಜಯದೇವ ಹೃದಯ ರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪ್ರಾಧ್ಯಾಪಕಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಅವರು, ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿಯೂ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಕರ್ನಾಟಕದ ಮಕ್ಕಳ ಹೃದಯರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಮುಂಚೂಣಿ ಸಾಧಕಿಯಾಗಿ ಗುರುತಿಸಿಕೊಂಡಿರುವ ಅವರು, ದಕ್ಷಿಣ ಭಾರತದಲ್ಲಿ ಮಕ್ಕಳ ಹೃದಯ ಚಿಕಿತ್ಸಾ ಕೇಂದ್ರ ಸ್ಥಾಪಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ. ಅಪರೂಪದ ಹೃದಯ ಕಾಯಿಲೆಗಳಿಗೆ ಆಧುನಿಕ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿ, ತಮ್ಮ ಸಂಶೋಧನೆಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಂಡಿಸಿದ್ದಾರೆ.
ದೇಶ-ವಿದೇಶಗಳ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಿರುವ ಅವರು, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ನೂರಾರು ಸಂಶೋಧನಾ ಪ್ರಬಂಧಗಳು ಹಾಗೂ ಉಪನ್ಯಾಸಗಳ ಮೂಲಕ ಜ್ಞಾನ ಹಂಚಿಕೊಂಡಿದ್ದಾರೆ.
ವೈದ್ಯರಷ್ಟೇ ಅಲ್ಲ... ಕನ್ನಡದ ಲೇಖಕಿಯೂ ಹೌದು!
ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರ ಸಾಧನೆಯ ಮತ್ತೊಂದು ವಿಶಿಷ್ಟ ಮುಖವೆಂದರೆ ಕನ್ನಡ ಸಾಹಿತ್ಯದೊಂದಿಗಿನ ಅವರ ನಂಟು. ವೈದ್ಯಕೀಯ ವೃತ್ತಿಯ ನಡುವೆಯೂ ಕನ್ನಡದಲ್ಲಿ ನಿರಂತರವಾಗಿ ಬರೆಯುತ್ತಾ, ಆರೋಗ್ಯ, ಸಮಾಜ ಹಾಗೂ ಜೀವನಮೌಲ್ಯಗಳ ಕುರಿತು ಜನಜಾಗೃತಿ ಮೂಡಿಸಿದ್ದಾರೆ.
ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾದ ಅವರ ಅಂಕಣ ಬರಹಗಳು ನಂತರ ‘ಜೀವನ ಧಾರೆ’, ‘ಜೀವನ ಜ್ಯೋತಿ’, ‘ಜೀವನ ಸಂಜೀವಿನಿ’, ‘ಜೀವನ ಮಾರ್ಗ’, ‘ಜೀವನ ಸಾಂತ್ವನ’, ‘ನಮ್ಮ ಹೃದಯ’, ‘ಅಕ್ಕಮಹಾದೇವಿ ಅಮರ ವಚನಗಳು’, ‘ಭಕ್ತಿಯಿಂದ ಮುಕ್ತಿ’, ‘ಸಮಾಜ ವಿಕಾಸಕ್ಕೆ ಶರಣ ಸಂಸ್ಕೃತಿ’, ‘ನಮ್ಮ ಹೃದಯ ಅತೀ ಅಮೂಲ್ಯ ಆಸ್ತಿ’ ಸೇರಿದಂತೆ ಇನ್ನೂ ಅನೇಕ ಕೃತಿಗಳಾಗಿ ಪ್ರಕಟಗೊಂಡಿವೆ.
ಅವರ ಸಾಹಿತ್ಯಿಕ ಚಿಂತನೆಯ ಮತ್ತೊಂದು ಪ್ರಮುಖ ಕೃತಿ ‘ಹೃದಯ ಹೃದಯವಂತಿಕೆ’. ವಿಜ್ಞಾನ ಮತ್ತು ತತ್ವಜ್ಞಾನದ ವಿಚಾರಗಳನ್ನು ಒಳಗೊಂಡಿರುವ ಈ ಕೃತಿ ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ. ‘ಜನನದಿಂದ ಬರುವ ಹೃದಯದ ಕಾಯಿಲೆಯ ಮೇಲೆ ವಿಜಯ’ ಹಾಗೂ ‘ಸಮೃದ್ಧ ಕರ್ನಾಟಕಕ್ಕೆ ಸದೃಢ ಹೃದಯ’ ಸೇರಿದಂತೆ ಜನಸಾಮಾನ್ಯರಿಗೆ ಆರೋಗ್ಯ ಜಾಗೃತಿ ಮೂಡಿಸುವ ಕಿರುಪುಸ್ತಕಗಳನ್ನೂ ಅವರು ಬರೆದಿದ್ದಾರೆ.
ಇಷ್ಟೇ ಅಲ್ಲದೆ, ಅವರ ‘ಕರ್ನಾಟಕದ ವೀರ ವನಿತೆಯರು’ ಕೃತಿ ೧೦ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿಯೂ ಅಳವಡಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡದ ಬಳಕೆಯ ಕುರಿತು ಉಪನ್ಯಾಸ ನೀಡಿರುವುದು ಅವರ ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿದೆ.
ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಡಾ. ಬಾಳೇಕುಂದ್ರಿ ಅವರು ಕನ್ನಡದಲ್ಲಿಯೇ ವೈಜ್ಞಾನಿಕ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ಕೂ ಒತ್ತು ನೀಡಿದ್ದಾರೆ. ರಾಷ್ಟ್ರೀಯ ಸಮ್ಮೇಳನಗಳಲ್ಲಿ ಕನ್ನಡದಲ್ಲಿ ವೈಜ್ಞಾನಿಕ ಉಪನ್ಯಾಸಗಳನ್ನು ನೀಡಿರುವ ಅವರು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ, ಸಾರ್ವಜನಿಕ ಆರೋಗ್ಯ ಜಾಗೃತಿ ಹಾಗೂ ವೈದ್ಯಕೀಯ ವೃತ್ತಿಯಲ್ಲಿ ಕನ್ನಡದ ಬಳಕೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ವಿಚಾರ ಮಂಡಿಸಿದ್ದಾರೆ. ಬೆಳಗಾವಿ ಹಾಗೂ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿಯೂ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಉಪನ್ಯಾಸ ನೀಡಿ ಗಮನ ಸೆಳೆದಿದ್ದಾರೆ.
ಪ್ರಶಸ್ತಿಗಳೇ ಹೇಳುತ್ತವೆ ಸಾಧನೆಯ ಕಥೆ
ವೈದ್ಯಕೀಯ, ಸಾಹಿತ್ಯ, ಸಮಾಜಸೇವೆ ಹಾಗೂ ಸಾರ್ವಜನಿಕ ಆರೋಗ್ಯ ಜಾಗೃತಿ ಕ್ಷೇತ್ರಗಳಲ್ಲಿ ಡಾ. ವಿಜಯಲಕ್ಷ್ಮೀ ಐ. ಬಾಳೇಕುಂದ್ರಿ ಅವರು ಸಲ್ಲಿಸಿರುವ ಅಪೂರ್ವ ಸೇವೆಗೆ ಸಾಕ್ಷಿಯಾಗಿ ೭೫ಕ್ಕೂ ಹೆಚ್ಚು ಪ್ರಶಸ್ತಿ-ಪುರಸ್ಕಾರಗಳು ಅವರ ಸಾಧನೆಯ ಮುಡಿಗೇರಿವೆ.
ರಾಜ್ಯೋತ್ಸವ ಪ್ರಶಸ್ತಿ, ರಾಜ್ಯರತ್ನ, ರಾಜ್ಯಭೂಷಣ, ಮಹಿಳಾ ರತ್ನ, ನಾಡೋಜ ಕಾತ್ಯಾಯಿನಿ ಪ್ರಶಸ್ತಿ, ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಅವರಿಗೆ ಸಂದಿವೆ. ಇದರ ಜೊತೆಗೆ ವಿವಿಧ ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿಗಳು ಅವರ ದಶಕಗಳ ವೈದ್ಯಕೀಯ ಸೇವೆ ಮತ್ತು ಸಾಧನೆಗೆ ಸಂದ ಗೌರವಗಳಾಗಿವೆ.
ವಿಶೇಷವಾಗಿ ಮಕ್ಕಳ ಹೃದಯರೋಗ ಚಿಕಿತ್ಸಾ ಕ್ಷೇತ್ರದಲ್ಲಿ ವಿಶ್ವಮಟ್ಟದ ಕೊಡುಗೆ ನೀಡಿರುವ ಅವರಿಗೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗೌರವಗಳು ಲಭಿಸಿವೆ. ೨೦೧೯ರಲ್ಲಿ ‘Iಛಿoಟಿ oಜಿ ಣhe ಅeಟಿಣuಡಿಥಿ iಟಿ Peಜiಚಿಣಡಿiಛಿ ಅಚಿಡಿಜioಟogಥಿ iಟಿ ಣhe Woಡಿಟಜ’ ಹಾಗೂ ೨೦೨೪ರಲ್ಲಿ ‘Iಛಿoಟಿ oಜಿ Peಜiಚಿಣಡಿiಛಿ ಅಚಿಡಿಜioಟogಥಿ’ ಎಂಬ ಗೌರವಗಳು ಅವರ ವೈದ್ಯಕೀಯ ಕ್ಷೇತ್ರದ ಸಾಧನೆಗೆ ದೊರೆತ ಪ್ರಮುಖ ಮನ್ನಣೆಗಳಾಗಿವೆ. ೨೦೨೫ ಮತ್ತು ೨೦೨೬ರಲ್ಲಿಯೂ ಹಲವು ಪ್ರಶಸ್ತಿ-ಪುರಸ್ಕಾರಗಳು ಅವರ ಸಾಧನೆಯ ಕಿರೀಟಕ್ಕೆ ಮತ್ತಷ್ಟು ಗರಿಮೆ ತಂದಿವೆ.
ಕಿತ್ತೂರು ಉತ್ಸವಕ್ಕೆ ಸಾಧನೆಯ ಸ್ಪರ್ಶ ನೀಡಲಿ
ಕಿತ್ತೂರು ಉತ್ಸವವು ಚನ್ನಮ್ಮನ ಇತಿಹಾಸವನ್ನು ನೆನಪಿಸುವುದರ ಜೊತೆಗೆ ಇಂದಿನ ಪೀಳಿಗೆಗೆ ಸಾಧನೆ, ಸ್ವಾಭಿಮಾನ ಮತ್ತು ನಾಡು-ನುಡಿಯ ಪ್ರೇರಣೆಯನ್ನು ನೀಡುವ ವೇದಿಕೆಯಾಗಬೇಕಾಗಿದೆ. ಅಂತಹ ಉತ್ಸವವನ್ನು ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವಮಟ್ಟದ ಸಾಧನೆ ಮಾಡಿರುವ, ಕನ್ನಡ ಸಾಹಿತ್ಯದಲ್ಲೂ ಗಮನಾರ್ಹ ಕೊಡುಗೆ ನೀಡಿರುವ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರಿಂದ ಉದ್ಘಾಟಿಸುವುದು ಅರ್ಥಪೂರ್ಣವಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
“ಕಿತ್ತೂರು ರಾಣಿ ಚನ್ನಮ್ಮನ ನಾಡಿನ ಉತ್ಸವವನ್ನು ಮಹಿಳಾ ಸಾಧಕಿಯೊಬ್ಬರ ಅಮೃತ ಹಸ್ತದಿಂದ ಉದ್ಘಾಟಿಸುವ ಮೂಲಕ ಮಹಿಳಾ ಶಕ್ತಿಗೆ ಗೌರವ ಸಲ್ಲಿಸಬೇಕು. ವೈದ್ಯಕೀಯದಂತಹ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು ಕನ್ನಡ ಸಾಹಿತ್ಯ ಮತ್ತು ಸಮಾಜಸೇವೆಯೊಂದಿಗೂ ನಂಟು ಹೊಂದಿದ್ದಾರೆ. ಹೀಗಾಗಿ ಅವರಿಂದ ಕಿತ್ತೂರು ಉತ್ಸವ ಉದ್ಘಾಟನೆಯಾಗಬೇಕು” ಎಂಬುದು ಕಿತ್ತೂರು ಭಾಗದ ಸಾರ್ವಜನಿಕರ ಒತ್ತಾಸೆಯಾಗಿದೆ.
ಕಿತ್ತೂರು ಉತ್ಸವದ ವೇದಿಕೆಯಲ್ಲಿ ಇತಿಹಾಸದ ವೀರಮಹಿಳೆ ರಾಣಿ ಚನ್ನಮ್ಮನ ಸ್ಮರಣೆಯೊಂದಿಗೆ ಇಂದಿನ ಕಾಲದ ಸಾಧಕ ಮಹಿಳೆಯೊಬ್ಬರಿಗೆ ಗೌರವ ಸಲ್ಲಿಸುವ ಅವಕಾಶವೂ ದೊರೆಯಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.
ವೈದ್ಯಕೀಯದಲ್ಲಿ ಸಾಧನೆ... ಸಾಹಿತ್ಯದಲ್ಲಿ ಸೇವೆ... ಸಮಾಜದಲ್ಲಿ ಜಾಗೃತಿ... ನಾಡು-ನುಡಿಯ ಬಗ್ಗೆ ಅಭಿಮಾನ...
ಈ ಎಲ್ಲ ಆಯಾಮಗಳನ್ನು ಒಳಗೊಂಡಿರುವ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರಿಂದ ೨೦೨೬ರ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಬೇಕು ಎಂಬ ಸಾರ್ವಜನಿಕರ ಬೇಡಿಕೆ ಇದೀಗ ಚರ್ಚೆಯ ಕೇಂದ್ರಬಿಂದುವಾಗಿದೆ.
ಬಾಕ್ಸ್ ಐಟಮ್-೧
"ಮೂಲತಃ ಬೆಳಗಾವಿ ಜಿಲ್ಲೆಯವರು ರಾಜ್ಯೋತ್ಸವ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಪಡೆದಿರುವ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು ಯಾವುದೇ ಪ್ರಚಾರವನ್ನು ಬಯಸದೆ, ಸದ್ದುಗದ್ದಲವಿಲ್ಲದೆ ಕನ್ನಡ ನಾಡು-ನುಡಿ ಹಾಗೂ ಗಡಿನಾಡಿನ ಕುರಿತು ಅಪಾರ ಅಭಿಮಾನವನ್ನು ಹೊಂದಿರುವ ಸಾತ್ವಿಕ ಸ್ವಭಾವದ ವ್ಯಕ್ತಿತ್ವದವರು.
ವೈದ್ಯಕೀಯ ಕ್ಷೇತ್ರದ ಜೊತೆಗೆ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲೂ ತಮ್ಮದೇ ಆದ ವಿಶಿಷ್ಟ ಹೆಸರು ಮಾಡಿರುವ ಇವರ ಅಮೃತ ಹಸ್ತದಿಂದಲೇ ಈ ಬಾರಿಯ ’ಕಿತ್ತೂರು ಉತ್ಸವ’ ಉದ್ಘಾಟನೆಗೊಳ್ಳಬೇಕು. ಇದರಿಂದ ಕಿತ್ತೂರು ಉತ್ಸವದ ಗರಿಮೆಯು ಮತ್ತಷ್ಟು ಹೆಚ್ಚಲಿದೆ" ಅಶೋಕ ಚಂದರಗಿ. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷರು ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಬೆಳಗಾವಿ.
ಬಾಕ್ಸ್ ಐಟಮ್-೨
"ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು ಮೂಲತಃ ಬೆಳಗಾವಿ ಜಿಲ್ಲೆಯವರಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡುವುದರ ಜೊತೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಒಬ್ಬ ಸಕ್ರಿಯ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಯಾವುದೇ ಪ್ರಚಾರವನ್ನು ಬಯಸುವವರಲ್ಲ, ಪ್ರಚಾರಕ್ಕಿಂತ ಕೆಲಸಕ್ಕೆ ಆದ್ಯತೆ ನೀಡಿ, ತಾವು ಮಾಡುವ ಕೆಲಸದ ಮೂಲಕವೇ ಗುರುತಿಸಿಕೊಂಡವರು. ವೈದ್ಯಕೀಯ, ಸಾಹಿತ್ಯ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅವರಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಹಲವು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ ಹಾಗಾಗಿ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರ ಅಮೃತ ಹಸ್ತದಿಂದ ಈ ಬಾರಿಯ ಕಿತ್ತೂರು ಉತ್ಸವವನ್ನು ಉದ್ಘಾಟನೆ ಮಾಡಿಸಬೇಕು. ಇದರಿಂದ ಕಿತ್ತೂರು ಉತ್ಸವದ ಘನತೆ ಮತ್ತಷ್ಟು ಹೆಚ್ಚಲಿದೆ" ಡಾ. ಜಗದೀಶ ಹಾರುಗೊಪ್ಪ. ನಿಕಟಪೂರ್ವ ಅಧ್ಯಕ್ಷರು ಚನ್ನಮ್ಮನ ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ.