ಸ್ಕ್ಯಾನಿಂಗ್ ಕಾರ್ಯಕ್ಕೆ ತಲಾ 8 ಡೇಟಾ ಆಪರೇಟರ್‌ಗಳನ್ನು ನೀಡಿದ್ದರೂ ಕೆಲ ತಾಲೂಕುಗಳಲ್ಲಿ ಪ್ರಗತಿ ನಿಧಾನವಾಗಿರುವುದು ಗಮನಕ್ಕೆ ಬಂದಿದೆ ಎಂದು ಸಚಿವರು ಹೇಳಿದರು. ಬೆಂಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ತಹಶೀಲ್ದಾರರ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಭೂ ಸುರಕ್ಷಾ ಯೋಜನೆ ಕುರಿತು ಸವಿಸ್ತಾರ ಚರ್ಚೆ ನಡೆಯಿತು.
ಭೂ ದಾಖಲೆ ಸ್ಕ್ಯಾನಿಂಗ್‌ನಲ್ಲಿ ನಿರ್ಲಕ್ಷ್ಯ ತೋರುತ್ತಿರುವ ತಹಶೀಲ್ದಾರರ ವಿರುದ್ಧ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದಿನಕ್ಕೆ ಸರಾಸರಿ 12,000 ಪುಟ ಸ್ಕ್ಯಾನ್ ಮಾಡುವ ಗುರಿ ಇದ್ದರೂ, ಕೆಲ ತಾಲೂಕುಗಳಲ್ಲಿ 8,000 ಪುಟಗಳನ್ನೂ ತಲುಪುತ್ತಿಲ್ಲ. ಪ್ರತಿ ತಾಲೂಕಿಗೆ 8 ಮಂದಿ ಡೇಟಾ ಆಪರೇಟರ್‌ಗಳನ್ನು ನಿಯೋಜಿಸಿದ್ದರೂ ಪ್ರಗತಿ ಕುಂಠಿತವಾಗಿರುವುದು ಗಂಭೀರ ವಿಷಯ ಎಂದು ಹೇಳಿದರು. ಗದಗ ಜಿಲ್ಲೆಯ ಶಿರಹಟ್ಟಿ ತಹಶೀಲ್ದಾರ್ ನೀಡಿದ ಸಮರ್ಪಕವಲ್ಲದ ಉತ್ತರಕ್ಕೆ ಸಚಿವರು ತರಾಟೆ ತೆಗೆದುಕೊಂಡರು.
ಮಲೆನಾಡಿನ ಚಿಕ್ಕಮಗಳೂರು, ಕೊಡಗು ಹಾಗೂ ಹಿಂದುಳಿದ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸ್ಕ್ಯಾನಿಂಗ್ ಪೂರ್ಣಗೊಂಡಿರುವಾಗ, ಬೆಂಗಳೂರು ನಗರ, ಶ್ರೀರಂಗಪಟ್ಟಣ, ಮದ್ದೂರು, ಪಾಂಡವಪುರ ಸೇರಿದಂತೆ ಇತರ ತಾಲೂಕುಗಳಲ್ಲಿ ಇದೇ ಸಾಧನೆ ಸಾಧ್ಯವಾಗದಿರುವುದೇಕೆ ಎಂದು ಪ್ರಶ್ನಿಸಿದರು. ಕಡಿಮೆ ಪ್ರಗತಿ ತೋರಿದ ತಾಲೂಕುಗಳ ಮೇಲೆ ನಿಗಾ ವಹಿಸಲು ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿದರು.
ಇದುವರೆಗೆ 19 ಲಕ್ಷ ಪುಟ ಭೂ ದಾಖಲೆಗಳನ್ನು ಜನರು ಆನ್‌ಲೈನ್ ಮೂಲಕ ಪಡೆದುಕೊಂಡಿದ್ದಾರೆ. ಕಚೇರಿಗಳಿಗೆ ಬಾರದೆಯೇ ಸೇವೆ ಪಡೆಯುವಂತೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಹಶೀಲ್ದಾರರಿಗೆ ತಿಳಿಸಿದರು. ಇದರಿಂದ ಅಧಿಕಾರಿಗಳ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಮಧ್ಯವರ್ತಿಗಳ ಹಾವಳಿ ತಗ್ಗುತ್ತದೆ ಎಂದರು.
ತಹಶೀಲ್ದಾರ್ ಕೋರ್ಟ್ ಪ್ರಕರಣಗಳ ವಿಲೇವಾರಿಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದ್ದು, ಹಳೆಯ ಪ್ರಕರಣಗಳು ಬಹುತೇಕ ಪರಿಹಾರವಾಗಿವೆ. ಆದಾಗ್ಯೂ ಶಿಗ್ಗಾಂವ್, ಶಿರಾ, ಮುಳಬಾಗಿಲು ತಾಲೂಕುಗಳಲ್ಲಿ 90 ದಿನ ಮೀರಿದ ಪ್ರಕರಣಗಳು ಬಾಕಿ ಉಳಿದಿದ್ದು, ಅವುಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಸೂಚಿಸಿದರು. ಒಟ್ಟು ಪ್ರಕರಣಗಳನ್ನು 10,700ರಿಂದ 140ಕ್ಕೆ ಇಳಿಸಲಾಗಿದೆ ಎಂದು ಹೇಳಿದರು.
ಫೌತಿಖಾತೆ ಪ್ರಕರಣಗಳಲ್ಲಿ ವ್ಯಾಜ್ಯರಹಿತ ಆಸ್ತಿಗಳ ವರ್ಗಾವಣೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು. ಬೆಂಗಳೂರು ಗ್ರಾಮಾಂತರ, ರಾಯಚೂರು, ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ಬಾಕಿ ಇರುವುದರಿಂದ ಅವುಗಳನ್ನು ತಕ್ಷಣ ಪರಿಹರಿಸಬೇಕು ಎಂದು ಹೇಳಿದರು.
ಪೋಡಿ ದುರಸ್ಥಿ ಸಂಬಂಧ 1ರಿಂದ 10 ಮಂಜೂರಿದಾರರಿರುವ ಸರ್ವೇ ನಂಬರ್‌ಗಳ 1ರಿಂದ 5ರ ತನಕದ ಕೆಲಸವನ್ನು ಒಂದು ವಾರದಲ್ಲಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಂದಾಯ ಗ್ರಾಮಗಳ ನೋಂದಣಿಯಲ್ಲಿ ಆಲೂರು, ನಂಜನಗೂಡು, ಯಲಹಂಕ, ಚಿಟಗುಪ್ಪ, ಯಳಂದೂರು, ಹರಪನಹಳ್ಳಿ, ಹಡಗಲಿ, ಕೂಡ್ಲಿಗಿ, ಕೊಳ್ಳೆಗಾಲ, ಜೇವರ್ಗಿ, ಹನೂರು ತಾಲೂಕುಗಳಲ್ಲಿ ಕಡಿಮೆ ಪ್ರಗತಿ ಕಂಡುಬಂದಿದೆ. ಈ ಕಾರ್ಯ ಬಡವರ ಹಿತಕ್ಕೆ ಸಂಬಂಧಿಸಿದದ್ದಾಗಿರುವುದರಿಂದ ಅರ್ಧಮಧ್ಯೆ ಬಿಟ್ಟುಬಿಡದೇ ಸಂಪೂರ್ಣಗೊಳಿಸಬೇಕು ಎಂದು ಹೇಳಿದರು.
ಕೆಲವರು ಸವಾಲಿನ ನಡುವೆಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕೆಲವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಬಡವರ ಕೆಲಸವನ್ನು ಯಾವುದೇ ಕಾರಣಕ್ಕೂ ವಿಳಂಬಗೊಳಿಸಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.