ಬೆಂಗಳೂರು, ಮೇ 26: ರಾಜ್ಯಸಭೆ ಚುನಾವಣೆಯ ಘೋಷಣೆಯ ಬೆನ್ನಲ್ಲೇ ಕರ್ನಾಟಕ ವಿಧಾನಪರಿಷತ್ ಚುನಾವಣೆಯ ವೇಳಾಪಟ್ಟಿಯನ್ನೂ ಚುನಾವಣಾ ಆಯೋಗ ಪ್ರಕಟಿಸಿದೆ. ಜೂನ್ 26ರಂದು ಅವಧಿ ಮುಕ್ತಾಯಗೊಳ್ಳಲಿರುವ 7 ಪರಿಷತ್ ಸ್ಥಾನಗಳಿಗೆ ಜೂನ್ 18ರಂದು ಮತದಾನ ನಡೆಯಲಿದ್ದು, ಅದೇ ದಿನ ಫಲಿತಾಂಶವೂ ಪ್ರಕಟವಾಗಲಿದೆ. ಕಾಂಗ್ರೆಸ್‌ನ 3, ಬಿಜೆಪಿ 3 ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರ ಅವಧಿ ಈ ತಿಂಗಳಲ್ಲೇ ಅಂತ್ಯಗೊಳ್ಳಲಿದ್ದು, ದಿನಾಂಕ ಘೋಷಣೆಯೊಂದಿಗೆ ಟಿಕೆಟ್ ಆಕಾಂಕ್ಷಿಗಳ ಚಟುವಟಿಕೆಗಳು ಚುರುಕುಗೊಂಡಿವೆ.
ಮುಖ್ಯಾಂಶಗಳು
ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ದಿನಾಂಕ ಪ್ರಕಟ
ಜೂನ್ 26ರಂದು ಖಾಲಿಯಾಗಲಿರುವ 7 ಸ್ಥಾನಗಳಿಗೆ ಚುನಾವಣೆ
ಜೂನ್ 18ರಂದು ಮತದಾನ ಹಾಗೂ ಮತ ಎಣಿಕೆ ಪ್ರಕ್ರಿಯೆ
ಕರ್ನಾಟಕ ವಿಧಾನಪರಿಷತ್ ಚುನಾವಣೆ ವೇಳಾಪಟ್ಟಿ
ಚುನಾವಣಾ ಅಧಿಸೂಚನೆ ಪ್ರಕಟ: ಜೂನ್ 01
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಜೂನ್ 08
ನಾಮಪತ್ರಗಳ ಪರಿಶೀಲನೆ: ಜೂನ್ 09
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಜೂನ್ 11
ಮತದಾನ: ಜೂನ್ 18
ಫಲಿತಾಂಶ ಪ್ರಕಟ: ಜೂನ್ 18
ಯಾವ ಸದಸ್ಯರ ಅವಧಿ ಮುಕ್ತಾಯವಾಗಲಿದೆ?
ಬಿ.ಕೆ. ಹರಿಪ್ರಸಾದ್, ನಾಸೀರ್ ಅಹ್ಮದ್, ತಿಪ್ಪಣ್ಣ, ಪ್ರತಾಪ್ ಸಿಂಹ ನಾಯಕ್, ಎನ್. ನಾಗರಾಜು (ಎಂಟಿಬಿ), ಸುನೀಲ್ ವಲ್ಯಾಪುರ ಹಾಗೂ ಗೋವಿಂದರಾಜು ಅವರ ಅವಧಿ ಜೂನ್‌ನಲ್ಲಿ ಅಂತ್ಯಗೊಳ್ಳಲಿದೆ. ವಿಧಾನಸಭೆಯ ಪ್ರಸ್ತುತ ಬಲಾಬಲದ ಲೆಕ್ಕಾಚಾರವನ್ನು ಗಮನಿಸಿದರೆ, ಖಾಲಿಯಾಗಲಿರುವ 7 ಸ್ಥಾನಗಳಲ್ಲಿ 5 ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಬಿಜೆಪಿ 2 ಸ್ಥಾನಗಳಿಗೆ ಸೀಮಿತವಾಗುವ ನಿರೀಕ್ಷೆ ಇದೆ. ಇದರಿಂದ ಕಾಂಗ್ರೆಸ್‌ಗೆ ಎರಡು ಸ್ಥಾನಗಳ ಹೆಚ್ಚಳವಾಗುವ ಸಾಧ್ಯತೆ ಇದ್ದರೆ, ಬಿಜೆಪಿ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನ ಕಳೆದುಕೊಳ್ಳುವ ಆತಂಕ ಎದುರಾಗಿದೆ.