ಇಂಡಿ: ಸಾಕ್ಷರತೆಯು ಕೇವಲ ಪದವಿ ಪಡೆಯುವ ಸಾಧನ ಅಲ್ಲ, ಅದು ಜಾಗತಿಕ ಮಟ್ಟದಲ್ಲಿ ಬದುಕಲು, ಸಂವಹನ ನಡೆಸಲು ಬೇಕಾದ ಅತಿ ಮುಖ್ಯ ಅಸ್ತ್ರವಾಗಿದೆ. ಎಲ್ಲರೂ ಶಿಕ್ಷಣವಂತರಾಗಿ ಆಧುನಿಕ ಸಾಕ್ಷರತೆಯ ಗುರಿ ಮುಟ್ಟುವದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು. ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ "ವಿಶ್ವ ಸಾಕ್ಷರತಾ ದಿನ"ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಕ್ಷರತೆಯು ವ್ಯಕ್ತಿಯಲ್ಲಿ ತನ್ನ ಹಕ್ಕು-ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಮೂಢನಂಬಿಕೆ, ಸಾಮಾಜಿಕ ಪಿಡುಗು, ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಲು ಇಂದಿನ ಪೀಳಿಗೆಗೆ ಸಾಕ್ಷರತೆಯೇ ಮುಖ್ಯ ಪ್ರೇರಣೆ. ಅದು ವ್ಯಕ್ತಿ ವಿಕಸನ ಮತ್ತು ದೇಶದ ಪ್ರಗತಿಯ ಅಸ್ತ್ರವಾಗಿದೆ ಎಂದು ಹೇಳಿದರು. ಶಿಕ್ಷಕ ಎಸ್ ಎಸ್ ಅರಬ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಕ್ಷರತೆಯು ಒಬ್ಬ ವ್ಯಕ್ತಿಗೆ ಜ್ಞಾನದ ಬಾಗಿಲನ್ನು ತೆರೆಯುತ್ತದೆ. ಅಕ್ಷರಸ್ಥ ವ್ಯಕ್ತಿಯು ಸಮಾಜದಲ್ಲಿ ಯಾರ ಮೇಲೂ ಅವಲಂಬಿತನಾಗದೆ ಸ್ವತಂತ್ರವಾಗಿ ಬದುಕಬಲ್ಲನು. ಇದು ಅವನಲ್ಲಿ ಆತ್ಮವಿಶ್ವಾಸ ತುಂಬಿ, ತಾರ್ಕಿಕ ಆಲೋಚನಾ ಶಕ್ತಿ ಹೆಚ್ಚಿಸಿ, ಬದುಕುವ ಕಲೆಯನ್ನು ರೂಢಿಸುತ್ತದೆ ಎಂದು ಹೇಳಿದರು. ಶಿಕ್ಷಕಿ ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕ ಅಫ್ತಾಬ್ ಮುಲ್ಲಾ, ಕುಲಶಾಬಿ ಬಿರಾದಾರ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.