ಬೆಂಗಳೂರು: ಲೇಡಿ ಇನ್ಫ್ಲುಯೆನ್ಸರ್ ವಿರುದ್ಧ ದಾಖಲಾಗಿದ್ದ ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಯುವತಿ ದೂರು ಕೊಡುವ ಭಯದಿಂದಲೇ ತನ್ನನ್ನು ರಕ್ಷಿಸಿಕೊಳ್ಳಲು ಕಾರ್ತಿಕ್ ಪುತಾ ಮೊದಲು ಸುಳ್ಳು ಕೇಸ್ ದಾಖಲಿಸಿದ್ದಾನೆ ಎಂದು ಪತ್ನಿ ಹರ್ಷಿತಾ ಗಂಭೀರ ಆರೋಪ ಮಾಡಿದ್ದಾರೆ.
ಮೇಕಪ್ ಕ್ಲಿನಿಕ್‌ಗೆ ಸಂಬಂಧಿಸಿದ ಕಾರ್ತಿಕ್ ಪುತಾ, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಈಗ ಪತ್ನಿ ಹರ್ಷಿತಾ ಹೈದರಾಬಾದ್ ಹಾಗೂ ಬೆಂಗಳೂರು ಡಿಜಿಗೆ ಪತ್ರ ಬರೆದು ಪತಿಯ ವಿರುದ್ಧವೇ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಕ್ಲಿನಿಕ್ ಪ್ರಚಾರದ ವೇಳೆ ಸಾಧನಾ ಶೆಟ್ಟಿಯೊಂದಿಗೆ ಪರಿಚಯ ಬೆಳೆಸಿಕೊಂಡ ಕಾರ್ತಿಕ್, ಬಳಿಕ ಪ್ರೀತಿಯ ಹೆಸರಿನಲ್ಲಿ ಆಕೆಯನ್ನು ಹತ್ತಿರ ಮಾಡಿಕೊಂಡಿದ್ದಾನೆ. ಇಬ್ಬರೂ ಹಲವು ಕಡೆ ಸಂಚರಿಸಿದ್ದು, ಆ ಸಂಬಂಧವನ್ನು ಬಳಸಿಕೊಂಡು ಆಕೆಯನ್ನು ಲೈಂಗಿಕವಾಗಿ ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ.
ಈ ವಿಚಾರವಾಗಿ ಯುವತಿ ಮನೆ ಬಳಿಗೆ ಬಂದು ಗಲಾಟೆ ನಡೆಸಿದ್ದಳು. ಕಳೆದ ವರ್ಷವೇ ಹೈದರಾಬಾದ್‌ನಲ್ಲಿ ಕಾರ್ತಿಕ್ ವಿರುದ್ಧ ದೂರು ನೀಡಲಾಗಿತ್ತು. ಆದರೆ ಆ ಸಂದರ್ಭದಲ್ಲೇ ಆಕೆಯ ಮೊಬೈಲ್ ಕಳವು ಮಾಡಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾನೆ ಎಂದು ಹರ್ಷಿತಾ ದೂರಿದ್ದಾರೆ.
ತನ್ನ ಲೈಂಗಿಕ ಸಂಬಂಧ ಬಹಿರಂಗವಾಗದಂತೆ ಮುಚ್ಚಿಹಾಕಲು ಖಾಸಗಿ ಫೋಟೋ ಮತ್ತು ವಿಡಿಯೋಗಳ ನೆಪದಲ್ಲಿ ಸಾಧನಾ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ಕಾರ್ತಿಕ್ ಸುಳ್ಳು ಕಥೆ ಹೆಣೆದಿದ್ದಾನೆ ಎಂದು ಪತ್ನಿ ಹೇಳಿದ್ದಾರೆ.
ಜಯನಗರ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಕಾರ್ತಿಕ್ ದೊಡ್ಡ ಉದ್ಯಮಿ ಅಲ್ಲ; ಕಾಸ್ಮೆಟಿಕ್ ಉತ್ಪನ್ನಗಳ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದ. ಯುವತಿ ದೂರು ಕೊಟ್ಟರೆ ತಾನೇ ಸಿಕ್ಕಿಬೀಳುವ ಭಯದಿಂದ ಬ್ಲ್ಯಾಕ್‌ಮೇಲ್ ನಾಟಕವಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಸಾಧನಾ ಶೆಟ್ಟಿ 1.5 ಕೋಟಿ ರೂ. ಹಣ ಬೇಡಿಕೆ ಇಟ್ಟಿದ್ದಾಳೆ ಎಂಬ ಆರೋಪ ಸಂಪೂರ್ಣ ಸುಳ್ಳು ಎಂದು ಹರ್ಷಿತಾ ಸ್ಪಷ್ಟಪಡಿಸಿದ್ದಾರೆ.