ಹಾಸನ, (ಏಪ್ರಿಲ್ 30): ಬೇಲೂರು ತಾಲ್ಲೂಕಿನ ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ (Love) ನಂಬಿಸಿ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿದ ಪ್ರಕರಣದಲ್ಲಿ ಪ್ರಿಯಕರನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರೇಮಿ ಪ್ರವೀಣ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಹಾಸನದ (Hassan) 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜೊತೆಗೆ ಸಾಕ್ಷಿ ನಾಶದ ಆರೋಪದಲ್ಲಿ ಎ2 ತಮ್ಮಣ್ಣಿಗೆ ಎರಡು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
2018ರ ಏಪ್ರಿಲ್ 22ರಂದು ತನ್ನ ಹುಟ್ಟುಹಬ್ಬ ಆಚರಿಸಲು ಬಂದಿದ್ದ ಪ್ರೇಯಸಿಯ ಮೇಲೆ ಪ್ರವೀಣ್ ಅತ್ಯಾಚಾರ ಎಸಗಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂಬುದು ಪ್ರಕರಣದ ಆರೋಪ. ಕಲ್ಕೆರೆ ಗ್ರಾಮದ ಬಳಿ ನಡೆದ ಈ ಘಟನೆ ಬಳಿಕ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಸುದೀರ್ಘ ವಿಚಾರಣೆಯ ಬಳಿಕ ಹಾಸನದ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಅಂತಿಮ ತೀರ್ಪು ನೀಡಿದ್ದು, ಪ್ರಿಯಕರ ಪ್ರವೀಣ್‌ಗೆ ಜೀವಾವಧಿ ಶಿಕ್ಷೆ ಹಾಗೂ ಎ2 ತಮ್ಮಣ್ಣಿಗೆ ಸಾಕ್ಷಿ ನಾಶದ ಆರೋಪದಲ್ಲಿ ಎರಡು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.