ತಾಳಿಕೋಟೆ, ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಭಕ್ತಿಭಾವದೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರು ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ತಮ್ಮ ಜೀವನದಲ್ಲಿ ಆಧ್ಯಾತ್ಮಿಕ ಪರಿವರ್ತನೆ ಹೊಂದುವ ಮೂಲಕ ಮಹಾನ್ ಋಷಿಗಳಾಗಿ ಬೆಳೆದರು. ಅವರ ಜೀವನದ ಹಾದಿ ಪ್ರತಿಯೊಬ್ಬರಿಗೂ ಉತ್ತಮ ಸಂದೇಶ ನೀಡುತ್ತದೆ. ತಮ್ಮ ಜ್ಞಾನ, ತಪಸ್ಸು ಮತ್ತು ಸಾಹಿತ್ಯ ಸಾಧನೆಯ ಮೂಲಕ ಸಂಸ್ಕೃತದ ಮೊದಲ ಕವಿಗಳೆಂದು ಪ್ರಸಿದ್ಧರಾದ ಅವರು, ರಾಮಾಯಣ ಮಹಾಕಾವ್ಯವನ್ನು ರಚಿಸಿ ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಮಹರ್ಷಿ ವಾಲ್ಮೀಕಿಯವರನ್ನು ಆದಿಕವಿ ಎಂದು ಗೌರವಿಸಲಾಗುತ್ತದೆ. ಅವರ ಜೀವನದಲ್ಲಿ ನಡೆದ ಪರಿವರ್ತನೆ, ಭಕ್ತಿ, ತಪಸ್ಸು ಹಾಗೂ ಸತ್ಯದ ಮಾರ್ಗದ ಅನುಸರಣೆಯು ಸಮಾಜಕ್ಕೆ ಸದಾ ಪ್ರೇರಣೆಯಾಗಿದೆ. ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಸಂತೋಷ ಪವಾರ, ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳಗಿ, ಶಾಂತಗೌಡ ಬಿರಾದಾರ ಸೇರಿದಂತೆ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.