ಸಿರುಗುಪ್ಪ :10: "ದಿವಂಗತ ರೇವಣಸಿದ್ಧಯ್ಯನವರು ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಹಣ ಮತ್ತು ಅಧಿಕಾರದ ಬೆನ್ನತ್ತಿ ಹೋದವರಲ್ಲ. ಜಾತಿ-ಧರ್ಮಗಳ ಭೇದ-ಭಾವ ಮಾಡದೆ ಸರ್ವರನ್ನೂ ಸಮಾನವಾಗಿ ಕಂಡ ಅವರ ಜೀವನ ಮತ್ತು ಆದರ್ಶಗಳು ನಮ್ಮೆಲ್ಲರಿಗೂ ದಾರಿದೀಪವಾಗಿವೆ," ಎಂದು ಮಾಜಿ ಶಾಸಕ ಟಿ. ಎಂ. ಚಂದ್ರಶೇಖರಯ್ಯ ಸ್ಮರಿಸಿದರು.
ಇಲ್ಲಿನ ಟಿ.ಎಚ್.ಎಂ.ಎಸ್.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅನ್ನಪೂರ್ಣ ಪ್ರಕಾಶನ ಸಿರಿಗೇರಿ ಸಂಸ್ಥೆಯ ವತಿಯಿಂದ ಮಾಜಿ ಶಾಸಕ ದಿವಂಗತ ಸಿ. ಎಂ. ರೇವಣಸಿದ್ಧಯ್ಯನವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ‘ಮಣ್ಣಿನ ಮಗ’ ಎಂಬ ಹೊತ್ತಿಗೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಅನ್ನಪೂರ್ಣ ಪ್ರಕಾಶನದ ಸಿರಿಗೇರಿ ಯಾರಿಸ್ವಾಮಿ ಮಾತನಾಡಿ, "ರೇವಣಸಿದ್ಧಯ್ಯನವರ ಜನ್ಮ ಶತಮಾನೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿಭಿನ್ನ ದಿನಾಂಕಗಳಂದು ಪುಸ್ತಕ ಬಿಡುಗಡೆ, ಸಾಕ್ಷ್ಯಚಿತ್ರ ಲೋಕಾರ್ಪಣೆ ಹಾಗೂ ರಾಜ್ಯ ಮಟ್ಟದ ರೈತ ಪ್ರಶಸ್ತಿ ಪ್ರದಾನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ," ಎಂದು ತಿಳಿಸಿದರು.
ಕಸಾಪ ಮಾಜಿ ಅಧ್ಯಕ್ಷರುಗಳಾದ ಎಂ.ಪಂಪಪತಿ, ಡಾ.ಎಸ್. ಚಂದ್ರಮೌಳಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್. ಕೆ. ಮಲ್ಲಿಕಾರ್ಜುನಯ್ಯ ಮಾತನಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಪ್ರಾಚಾರ್ಯರು ಜೀನಿನ ಕೊಟ್ರಪ್ಪ. ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಂ.ಚಂದ್ರಕಾಂತ, ಮುಖಂಡ ರಾಜೇಗೌಡ, ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.