ಬೆಂಗಳೂರು: ತಾಯಿ ಜೊತೆ ನಗುತ್ತಾ ಮಾತನಾಡುತ್ತಿದ್ದ ವೇಳೆ ಏಕಾಏಕಿ ಬ್ರೈನ್ ಸ್ಟ್ರೋಕ್ (Brain Stroke) ಆಗಿ ಚಿಕಿತ್ಸೆ ಫಲಕಾರಿಯಾಗದೇ ಟೆಕ್ಕಿ (Techie) ಯುವತಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಹಾಸನ ಜಿಲ್ಲೆಯ 25 ವರ್ಷದ ಶ್ವೇತಾ ಮೃತ ಯುವತಿ. ಏಪ್ರಿಲ್ 25ರಂದು ಕೆಲಸ ಮುಗಿಸಿ ಮನೆಗೆ ಬಂದಿದ್ದ ಶ್ವೇತಾ, ತಾಯಿಯೊಂದಿಗೆ ಮಾತನಾಡುತ್ತಾ ಇದ್ದಾಗಲೇ ಅಚಾನಕ್ ಕುಸಿದು ಬಿದ್ದು ಮಾತನಾಡಲಾಗದ ಸ್ಥಿತಿಗೆ ತಲುಪಿದ್ದರು. ಬಳಿಕ ಅವರನ್ನು ತುರ್ತುವಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದ್ದು, ಆಗಲೇ ಅವರು ಕೋಮಾಗೆ ಜಾರಿದ್ದರು.
ಬ್ರೈನ್ ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ದುಃಖದ ನಡುವೆಯೇ ಪೋಷಕರು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಶ್ವೇತಾ ಮೃತಪಟ್ಟ ಹಿನ್ನೆಲೆ ಅಂಗಾಂಗ ದಾನ ಪ್ರಕ್ರಿಯೆ ನಡೆಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಒಬ್ಬಳೇ ಪುತ್ರಿಯನ್ನು ಕಳೆದುಕೊಂಡ ಪೋಷಕರು ದುಃಖದಲ್ಲಿ ಮುಳುಗಿದ್ದಾರೆ. ಮೃತದೇಹವನ್ನು ಹಾಸನಕ್ಕೆ ಕೊಂಡೊಯ್ಯಲಾಗಿದೆ.
ಇತ್ತೀಚೆಗೆ ಹಾಸನದಲ್ಲಿ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಯಾವುದೇ ಪೂರ್ವ ಲಕ್ಷಣಗಳಿಲ್ಲದೆ ಆರೋಗ್ಯವಾಗಿದ್ದ ಶ್ವೇತಾ ಬ್ರೈನ್ ಸ್ಟ್ರೋಕ್‌ಗೆ ಬಲಿಯಾಗಿರುವುದು ಮತ್ತಷ್ಟು ಆತಂಕ ಹುಟ್ಟಿಸಿದೆ.