ಚಿತ್ರದುರ್ಗ: ಹಣ ಡಬ್ಲಿಂಗ್ ದಂಧೆ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್ ಅಲಿಯಾಸ್ ಕೋಟಾನೋಟ್ ಚಂದ್ರ ಬಂಧಿತ ಆರೋಪಿ. ಮೃತ ಮಲ್ಲಿಕಾರ್ಜುನ (40) ಅವರಿಗೆ ಲೋನ್ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದ ಆರೋಪ ಕೇಳಿಬಂದಿದೆ. ಅಲ್ಲದೇ, ಮಲ್ಲಿಕಾರ್ಜುನ ಅವರ ಬ್ಯಾಂಕ್ ಖಾತೆ ಬಳಸಿ ಹಣ ಡಬ್ಲಿಂಗ್ ದಂಧೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ಮಲ್ಲಿಕಾರ್ಜುನ ಪ್ರಮುಖ ಸಾಕ್ಷಿಯಾಗಿದ್ದರು. ಇದರಿಂದಾಗಿ ಚಂದ್ರಶೇಖರ್ ಮಲ್ಲಿಕಾರ್ಜುನ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮೇ 1ರಂದು ಚಿತ್ರದುರ್ಗದ ಜಾನಕೊಂಡ ಸಮೀಪದ ತೋಟದ ಮನೆಯಲ್ಲಿ ಮಲ್ಲಿಕಾರ್ಜುನ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಘಟನೆ ಸಂಬಂಧ ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಈ ಹಿಂದೆ ಏಪ್ರಿಲ್ 14ರಂದು ಸಂಭವಿಸಿದ್ದ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಮಲ್ಲಿಕಾರ್ಜುನ ಚಿಕಿತ್ಸೆ ಪಡೆದು ಏಪ್ರಿಲ್ 18ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ನಂತರ ಅವರನ್ನು ಚಂದ್ರಶೇಖರ್‌ಗೆ ಸೇರಿದ ತೋಟದಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಅಕ್ರಮ ದಂಧೆಯ ಸುಳಿವು ಹೊರಬಾರದಂತೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಮಲ್ಲಿಕಾರ್ಜುನ ಪತ್ನಿ ಆಶಾ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಚಂದ್ರಶೇಖರ್ ಹಾಗೂ ಸದಾಶಿವ ನಾಯಕನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿರುವ ಚಂದ್ರಶೇಖರ್ ಪುತ್ರ ವಿನಾಯಕ್‌ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.