ಅಥಣಿ : ಮುಂಗಾರು ಮಳೆಯಾಗದೆ ತಾಲೂಕಿನ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ, ರಾಜ್ಯ ಸರ್ಕಾರ ತುರ್ತು ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸುವ ಮೂಲಕ ಬರಪೀಡಿತ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಶಹಜಹಾನ ಡೊoಗರಗಾಂವ ಒತ್ತಾಯಿಸಿದರು.
ಅವರು ಸೋಮವಾರ ಇಲ್ಲಿನ ಮಿನಿ ವಿಧಾನಸೌಧ ತಹಸೀಲ್ದಾರ್ ಕಚೇರಿಯ ಮುಂದೆ ಜಾತ್ಯತೀತ ಜನತಾದಳ ( ಜೆಡಿಎಸ್) ಪಕ್ಷದ ವತಿಯಿಂದ ಪ್ರತಿಭಟನಾ ಮನವಿ ಸಲ್ಲಿಕೆಯ ನೇತೃತ್ವ ವಹಿಸಿ ಮಾತನಾಡಿದರು.
ಅಥಣಿ ತಾಲೂಕಿನಲ್ಲಿ ಮುಂಗಾರು ಮಳೆಯ ಅಭಾವದಿಂದ ರೈತರು ಬೆಳೆದ ಬೆಳೆಗಳೆಲ್ಲ ಸಂಪೂರ್ಣ ಒಣಗಿ ಹೋಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ, ಅವರಿಗೆ ತುರ್ತು ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು, ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ದನ ಕರುಗಳಿಗೆ ಗೋಶಾಲೆಗಳನ್ನು ಬೇಗನೆ ಆರಂಭಿಸಬೇಕು. ಹಿಂಗಾರಿ ಮಳೆ ಕೂಡ ಆಗುವ ಲಕ್ಷಣಗಳು ಕಾಣುತ್ತಿಲ್ಲ, ಆದ್ದರಿಂದ ರಾಜ್ಯ ಸರ್ಕಾರ ಬರಗಾಲ ಪೀಡಿತ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಸಂಪೂರ್ಣ ಸಾಲ ಮನ್ನಾ ಮಾಡಲು ಅಗ್ರಹ :
ರೈತರು ಗ್ರಾಮೀಣ ಸಹಕಾರಿ ಸಂಘಗಳಲ್ಲಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ರಾಜ್ಯ ಸರ್ಕಾರ ಸಹಕಾರಿ ಸಂಘಗಳ ಸಾಲವನ್ನು ಮನ್ನಾ ಮಾಡಿದರೆ, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲವನ್ನು ಮುನ್ನ ಮಾಡಬೇಕು ಎಂದು ಅಗ್ರಹಿಸಿದರು.
ಕಬ್ಬು ಬೆಳೆಗಾರರಿಗೆ 5500 ರೂ. ದರ ನೀಡಿ :
ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಸಕಾಲಕ್ಕೆ ಮತ್ತು ಯೋಗ್ಯ ಬೆಲೆ ನೀಡುತ್ತಿಲ್ಲ. ಇತ್ತೀಚೆಗೆ ಸಕ್ಕರೆ ದರ ಕೂಡ ಹೆಚ್ಚಾಗಿದ್ದು, ಇದರಿಂದ ರೈತರ ಕಬ್ಬಿಗೂ ಯೋಗ್ಯ ಬೆಲೆ ಘೋಷಿಸುವುದು ಅಗತ್ಯವಾಗಿದೆ. ಅನೇಕ ರೈತ ಮುಖಂಡರು ಮತ್ತು ರೈತ ಸಂಘದ ಮುಖಂಡರು ಪ್ರತಿ ಟನ್ ಕಬ್ಬಿಗೆ 5500 ರೂ. ದರ ನಿಗದಿಪಡಿಸುವಂತೆ ಆಗ್ರಹಿಸುತ್ತಿದ್ದಾರೆ. ಅವರ ಹೋರಾಟಕ್ಕೆ ಜೆಡಿಎಸ್ ಬೆಂಬಲ ನೀಡುವುದರ ಜೊತೆಗೆ ಸರ್ಕಾರವನ್ನ ನಾವು ಕೂಡ ರೈತರ ಕಬ್ಬಿಗೆ ಯೋಗ್ಯ ಬೆಲೆ ನೀಡುವಂತೆ ಒತ್ತಾಯಿಸುತ್ತೇವೆ ಎಂದರು.
ಸಮರ್ಪಕ ವಿದ್ಯುತ್ ಪೂರೈಸಿ :
ಮಳೆ ಇಲ್ಲದೆ ಬೆಳೆಗಳು ಒಣಗುತ್ತಿರುವ ಇಂತಹ ಸಂದರ್ಭದಲ್ಲಿ ಇರುವ ಅಲ್ಪ ಸ್ವಲ್ಪ ನೀರನ್ನು ಬೆಳೆಗಳಿಗೆ ಮತ್ತು ಮನೆಯ ಬಳಕೆಗೆ ಬಳಸಿಕೊಳ್ಳಲು ಸಮರ್ಪಕವಾದ ವಿದ್ಯುತ್ ಶಕ್ತಿಯನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಲೋಡ್ ಶೇಡ್ಡಿಂಗ್ ಆರಂಭಗೊಂಡಿದ್ದು, ರೈತರಿಗೆ ಮತ್ತು ಸಾರ್ವಜನಿಕರಿಗೆ ಸಮರ್ಪಕವಾಗಿ ವಿದ್ಯುತ್ ಸಿಗುತ್ತಿಲ್ಲ, ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸರ್ಕಾರ ಕೂಡಲೇ ಹೊರರಾಜ್ಯಗಳಿಂದ ವಿದ್ಯುತ್ತನ್ನು ಖರೀದಿಸಿ ರಾಜ್ಯದ ಜನತೆಗೆ ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಸರ್ಕಾರವನ್ನ ಒತ್ತಾಯಿಸಿದರು.
ಸರ್ಕಾರ ನೆರವಿಗೆ ಬರೆದಿದ್ದರೆ ಸತ್ಯಾಗ್ರಹ :
ಬರಗಾಲದಿಂದ ತತ್ತರಿಸಿರುವ ತಾಲೂಕಿನ ಜನರಿಗೆ ಮತ್ತು ರೈತರಿಗೆ ಸರ್ಕಾರ ಕೂಡಲೇ ನೆರವಿನ ಹಸ್ತ ನೀಡಬೇಕು, ಮತಕ್ಷೇತ್ರದ ಶಾಸಕರಾಗಿರುವ ಲಕ್ಷ್ಮಣ ಸವದಿ ಈಗ ರಾಜ್ಯ ಸರ್ಕಾರದಲ್ಲಿ ಮಂತ್ರಿ ಆಗಿದ್ದಾರೆ, ತಾಲೂಕಿನ ರೈತರ ಸಂಕಷ್ಟಗಳಿಗೆ ತ್ವರಿತ ಗತಿಯಲ್ಲಿ ಸ್ಪಂದಿಸಬೇಕು. ಈ ಮನವಿಗೆ ಸ್ಪಂದಿಸದೆ ನಿರ್ಲಕ್ಷ ಧೋರಣೆ ತೋರಿದರೆ ಮುಂಬರುವ ದಿನಗಳಲ್ಲಿ ಇದೇ ತಹಶೀಲ್ದಾರ ಕಚೇರಿಗೆ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ಷಹಜಾನ್ ಡೊಂಗರಗಾವ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಚಿಕ್ಕೋಡಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕಲ್ಲಪ್ಪ ಮಗನ್ನವರ, ಕಾಗವಾಡ ಮತಕ್ಷೇತ್ರದ ಜೆಡಿಎಸ್ ಮುಖಂಡ ಮಲ್ಲು ಗುಂಜಿಗಾವಿ, ರೈತ ಮುಖಂಡ ಮಲ್ಲಪ್ಪ ಹಳ್ಳೂರ, ರಾಜು ಡೌರಿ ಮಾತನಾಡಿ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳಲ್ಲಿ ಬರ ಪರಿಹಾರ ಕಾಮಗಾರಿ ಮತ್ತು ಪರಿಹಾರ ಕಾರ್ಯಗಳನ್ನು ಕೈ ಕೊಳ್ಳುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ರೈತರು ಸಂಕಷ್ಟದಲ್ಲಿದ್ದು ಸರ್ಕಾರ ಕೂಡಲೇ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ನಂತರ ಉಪ- ಹತಹಸಿಲ್ದಾರ ಮಹಾದೇವ ಬಿರಾದಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಥಣಿ ತಾಲೂಕ ಜೆಡಿಎಸ್ ಅಧ್ಯಕ್ಷ ದುಂಡಪ್ಪ ನಿಂಗನೂರು, ಜೆಡಿಎಸ್ ಮುಖಂಡರಾದ ವಿದ್ಯಾಧರ ನಾಡಗೌಡ, ಮುತ್ತಣ್ಣ ಸಂತಿ, ಲಕ್ಕಪ್ಪ ಮುಡಸಿ, ರಾಜು ಢವರಿ, ಮಲ್ಲಿಕಾರ್ಜುನ ಕಲಶೆಟ್ಟಿ, ಜಕ್ಕಪ್ಪ ಧರಿಗೌಡ, ಶಬ್ಬೀರ ಪಾಟೀಲ, ಕಲ್ಲಪ್ಪ ಕೊರಬು, ಅಪ್ಪಾಸಾಬ ಪಾಟೀಲ, ಲಕ್ಷ್ಮಿ ಪೂಜಾರಿ, ಶಾರದಾ ಪೂಜಾರಿ, ಬಾಳವ್ವ ಪಾಟೀಲ ಸೇರಿದಂತೆ ಅನೇಕ ರೈತ ಮಹಿಳೆಯರು ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.