ಬಳ್ಳಾರಿ, ಅ.03: ಪೌರತ್ವವು ಹಕ್ಕುಗಳ ಅನುಭವಕ್ಕೆ ಮಾತ್ರ ಸೀಮಿತವಾಗದೆ, ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಜವಾಬ್ದಾರಿಯೂ ಆಗಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ಸಹಾಯಕ ನಿರ್ದೇಶಕ ಡಾ. ಗೋಪಾಲ್ ಎನ್. ಹೇಳಿದರು.
ನಗರದ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ದಮ್ಮೂರು ಗ್ರಾಮದ ಶ್ರೀ ಸದ್ಗುರು ವೆಂಕಪ್ಪ ತಾತನ ಆಶ್ರಮದಲ್ಲಿ ಆಯೋಜಿಸಿದ್ದ ಮೂರು ದಿನಗಳ ಪೌರತ್ವ ತರಬೇತಿ ಶಿಬಿರ–2026ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ, ಸಹಕಾರ, ಸೇವಾ ಮನೋಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಶಿಬಿರಗಳು ಯುವಜನರಲ್ಲಿ ರಾಷ್ಟ್ರಪ್ರೇಮ ಮತ್ತು ಉತ್ತಮ ನಾಗರಿಕ ಪ್ರಜ್ಞೆ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರೊ. ಸುರೇಶ್ ಬಾಬು ಮಾತನಾಡಿ, ಶಿಕ್ಷಕರಾಗಲಿರುವ ಪ್ರಶಿಕ್ಷಣಾರ್ಥಿಗಳು ಭವಿಷ್ಯದ ಸಮಾಜ ನಿರ್ಮಾತೃಗಳಾಗಿದ್ದು, ತಮ್ಮ ನಡವಳಿಕೆ, ಮೌಲ್ಯಗಳು ಹಾಗೂ ಸಾಮಾಜಿಕ ಬದ್ಧತೆಯ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ತಾಜುದ್ದೀನ್ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ಮಾನವೀಯತೆ, ಉತ್ತಮ ಸಂಸ್ಕಾರ ಹಾಗೂ ಸಂವಿಧಾನಾತ್ಮಕ ಮೌಲ್ಯಗಳ ಅರಿವು ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ. ಶಿಬಿರದಲ್ಲಿ ಪಡೆದ ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಗೋಪಾಲ್ ಎನ್. ಹಾಗೂ ಪ್ರೊ. ಸುರೇಶ್ ಬಾಬು ಅವರನ್ನು ಸನ್ಮಾನಿಸಲಾಯಿತು. ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಪ್ರಾಂಶುಪಾಲ ಹಾಗೂ ಶಿಬಿರ ನಿರ್ದೇಶಕ ಡಾ. ಅಶ್ವ ರಾಮು, ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ವೀರಭದ್ರಪ್ಪ, ಸಹಾಯಕ ಪ್ರಾಧ್ಯಾಪಕ ಆಲಂ ಬಾಷಾ, ಕಾಲೇಜಿನ ಅಧ್ಯಕ್ಷೆ ಆಲ್ಮಸ್ ತಬಸ್ಸುಮ್, ಆಡಳಿತಾಧಿಕಾರಿ ಹಫೀಜಾ ಬೇಗಂ, ಹಣಕಾಸು ವಿಭಾಗದ ಉಮೇಮ ಜೈಬ್, ಶಿಬಿರ ಸಂಯೋಜಕ ಆಂಥೋನಿ ಐ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶಿಬಿರಾಗ್ನಿ ಹಾಗೂ ಪೌರತ್ವದ ಪ್ರತಿಜ್ಞಾ ವಿಧಿ ನಡೆಯಿತು.