LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಂ ಎಸ್ ಐ ಎಲ್: ಒಂದೇ ದಿನ ₹18.85 ಕೋಟಿ ಮದ್ಯ ಮಾರಾಟ

ಬೆಂಗಳೂರು: ರಾಜ್ಯದಲ್ಲಿರುವ 1031 ಎಂ ಎಸ್ ಐ ಎಲ್ ಮದ್ಯ ಮಾರಾಟ ಮಳಿಗೆಗಳಲ್ಲಿ 2023ರ ಕೊನೆಯ ದಿನವಾದ ಭಾನುವಾರ (ಡಿ.31) ₹18.85 ಕೋಟಿ ಮೊತ್ತದ ದಾಖಲೆಯ ಮದ್ಯ ಮಾರಾಟವಾಗಿದೆ ಎಂದು ಎಂ ಎಸ್ ಐ ಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ತಿಳಿಸಿದ್ದಾರೆ.

ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಇದು ಸುಮಾರು ₹ 4.34 ಕೋಟಿ ಹೆಚ್ಚಳವಾಗಿದೆ. 2022ರ ಡಿ. 31ರಂದು ₹14.51 ಕೋಟಿ ಮೊತ್ತದ ಮದ್ಯ ಮಾರಾಟವಾಗಿತ್ತು ಎಂದು ಅವರು ಹೇಳಿದ್ದಾರೆ.

ರಾಯಚೂರಿನ ರೈಲ್ವೆ ನಿಲ್ದಾಣದ ಬಳಿ ಇರುವ ಮಳಿಗೆಯಲ್ಲಿ ಅತ್ಯಂತ ಹೆಚ್ಚು, ಅಂದರೆ ₹11.66 ಲಕ್ಷ ರೂಪಾಯಿಗಳ ಮದ್ಯ ಮಾರಾಟವಾಗಿದ್ದರೆ, ಅದೇ ನಗರದ ಗಂಝ್ ರಸ್ತೆಯ ಮಳಿಗೆಯಲ್ಲಿ ₹9.96 ಲಕ್ಷದ ಮದ್ಯ ಬಿಕರಿಯಾಗಿ ಎರಡನೇ ಸ್ಥಾನದಲ್ಲಿದೆ. ಜಿಲ್ಲಾವಾರು ಮಾರಾಟದಲ್ಲಿ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತ್ಯಧಿಕ, ಅಂದರೆ ₹1.82 ಕೋಟಿಯ ಮದ್ಯ ಮಾರಾಟ ಕಂಡಿದೆ. ಕಳೆದ ವರ್ಷದ ಇದೇ ದಿನ ಈ ಜಿಲ್ಲೆಯಲ್ಲಿ ರೂ 1.35 ಕೋಟಿಯ ಮದ್ಯ ಮಾರಾಟವಾಗಿತ್ತು.

ಉನ್ನತ ದರ್ಜೆಗೇರಿಸಿ ಉದ್ಘಾಟನೆಗೊಂಡ ಬೆಂಗಳೂರು ಬಸವೇಶ್ವರನಗರದ ಎಂ ಎಸ್ ಐ ಎಲ್ ಬೋಟಿಕ್ ನಲ್ಲಿ ಭಾನುವಾರ ಆದ ಮದ್ಯ ಮಾರಾಟದ ಮೊತ್ತ ರೂ 3.5 ಲಕ್ಷ. ಇಲ್ಲಿ ಕಳೆದ ವರ್ಷದ ಇದೇ ದಿವಸ ಈ ಮಳಿಗೆಯಲ್ಲಿ ರೂ. 2.59ಲಕ್ಷದ ಮದ್ಯ ಮಾರಾಟವಾಗಿತ್ತು ಎಂದು ಮನೋಜ್ ಹೇಳಿದ್ದಾರೆ.

ಉಳಿದ ದಿನಗಳಂದು ರಾಜ್ಯದ ಎಲ್ಲಾ ಎಂಎಸ್ಐಎಲ್ ಮಳಿಗೆಗಳಿಂದ ಆಗುವ ಮದ್ಯ ಮಾರಾಟದ ವಹಿವಾಟು ರೂ 8 ಕೋಟಿಯಷ್ಟಿರುತ್ತದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಇದು ರೂ 18.8 ಕೋಟಿಗೆ ಏರಿಕೆಯಾಗಿದೆ.

ಬಸವೇಶ್ವರ ನಗರದಲ್ಲಿ ಮೊದಲ  ಎಂಎಸ್ಐಎಲ್ ಮಳಿಗೆ ಉದ್ಘಾಟನೆ

ಸರಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಇಲ್ಲಿನ ಬಸವೇಶ್ವರ ನಗರದ ತಿಮ್ಮಯ್ಯ ರಸ್ತೆಯಲ್ಲಿ ಹೊಸದಾಗಿ ಆರಂಭಿಸಿರುವ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ನೂತನ ವರ್ಷಾರಂಭದ ದಿನವಾದ ಸೋಮವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,`ಮಧ್ಯಮ ವರ್ಗದಿಂದ ಹಿಡಿದು ಸಮಾಜದ ಪ್ರತಿಯೊಂದು ವರ್ಗದ ಗ್ರಾಹಕರನ್ನೂ ಸೆಳೆಯುವುದು ಎಂಎಸ್ಐಎಲ್ ನ ಗುರಿಯಾಗಿದೆ. ಇದರಂತೆ, ಹೊಸ ರೂಪ ಪಡೆದಿರುವ ಈ ಬೋಟಿಕ್ ನಲ್ಲಿ ಸಾಮಾನ್ಯ ಬೆಲೆಯಿಂದ ಹಿಡಿದು ಅತ್ಯಂತ ದುಬಾರಿ ಬೆಲೆಯ ಬ್ರಾಂಡೆಡ್ ಮದ್ಯದ ಉತ್ಪನ್ನಗಳು ಸುಲಭವಾಗಿ ಸಿಗಲಿದೆ. ಚಿತ್ತಾಕರ್ಷಕ ಒಳಾಂಗಣ ವಿನ್ಯಾಸ ಮತ್ತು ಗ್ರಾಹಕರಿಗೆ ಹಿತಕರ ಅನುಭವ ಸಿಗುವಂತೆ ಮಾಡಲು ಇಲ್ಲಿ ಆದ್ಯತೆ ಕೊಡಲಾಗಿದ್ದು, ಜಾಗತಿಕ ಗುಣಮಟ್ಟದ ಮಾಲ್ ರೀತಿಯಲ್ಲಿ ಈ ಪ್ರೀಮಿಯಂ ಬೋಟಿಕ್ ಇದೆ” ಎಂದರು.

ಎಂಎಸ್ಐಎಲ್ ಅಧ್ಯಕ್ಷರೂ ಆದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಸಲಹೆ ಮೇರೆಗೆ ಹಾಲಿ ಇರುವ ಮದ್ಯ‌ ಮಾರಾಟ ಮಳಿಗೆಗಳನ್ನು ಹೈಟೆಕ್ ರೀತಿಯಲ್ಲಿ ವಿನ್ಯಾಸ ಮಾಡಲು ಆರಂಭಿಸಿದ್ದು ಹಂತಹಂತವಾಗಿ‌ ಎಲ್ಲವನ್ನೂ ಬದಲಿಸಲಾಗುವುದು ಎಂದರು.

ಎಂಎಸ್ಐಎಲ್ ರಾಜ್ಯದಲ್ಲಿ ಒಟ್ಟು 1,029 ಮದ್ಯ ಮಾರಾಟ ಮಳಿಗೆಗಳನ್ನು ನಡೆಸುತ್ತಿದೆ. ಈ ಪೈಕಿ 200 ಮಳಿಗೆಗಳನ್ನು ಬೋಟಿಕ್ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇದರಲ್ಲಿ 20 ಮಳಿಗೆಗಳು ಬೆಂಗಳೂರಿನಲ್ಲೇ ಇರಲಿವೆ. ಇನ್ನು ಕೆಲವೇ ದಿನಗಳಲ್ಲಿ ಡಾ.ರಾಜಕುಮಾರ್ ರಸ್ತೆ, ಆರ್ ಪಿಸಿ ಬಡಾವಣೆ ಮತ್ತು ವಿಜಯನಗರದಲ್ಲಿ ಇಂತಹ ಬೋಟಿಕ್ ಮದ್ಯಪ್ರಿಯರಿಗೆ ಮುಕ್ತವಾಗಲಿವೆ ಎಂದು ಅವರು ಹೇಳಿದರು.

ಇದಲ್ಲದೆ ಶಿವಾನಂದ ವೃತ್ತ, ವರ್ತೂರು, ಕೆಂಗೇರಿ ಉಪನಗರ, ಮಾರುತಿ ಸೇವಾ ನಗರ, ಹನುಮಂತ ನಗರ ಮತ್ತು ಸರ್ಜಾಪುರ ರಸ್ತೆಯಲ್ಲಿರುವ ದೊಡ್ಡಕನ್ನಹಳ್ಳಿಯಲ್ಲಿ ಇರುವ ಎಂಎಸ್ಐಎಲ್ ಮಳಿಗೆಗಳನ್ನು ಬೋಟಿಕ್ ಗಳಾಗಿ ರೂಪಾಂತರಿಸುವ ಕೆಲಸ ಪ್ರಗತಿಯಲ್ಲಿದೆ. ಈ ಎಲ್ಲ ಮಳಿಗೆಗಳಲ್ಲೂ ಚಿಲ್ಲರೆ ಮಾರಾಟ ದರದಲ್ಲಿ ಅತ್ಯುತ್ಕೃಷ್ಟ ಮದ್ಯಗಳು ಲಭ್ಯವಾಗಲಿವೆ ಎಂದು ಅವರು ನುಡಿದರು.

ಎಂಎಸ್ಐಎಲ್ ರಾಜ್ಯದಲ್ಲಿರುವ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇಂತಹ ತಲಾ 2 ಬೋಟಿಕ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಇಂತಹ ಬೋಟಿಕ್ ತೆರೆಯಲಿದೆ. ಇವೆಲ್ಲವೂ ಇನ್ನು ಮೂರ್ನಾಲ್ಕು ತಿಂಗಳುಗಳಲ್ಲಿ ಹಂತಹಂತವಾಗಿ ಆರಂಭವಾಗಲಿವೆ. ಮದ್ಯಪ್ರಿಯರು ಯಾವುದೇ ತೊಂದರೆ ಇಲ್ಲದೆ, ತಮಗೆ ಬೇಕಾದ ದರ್ಜೆಯ ಮದ್ಯದ ಉತ್ಪನ್ನಗಳನ್ನು ಇಲ್ಲಿ ಖರೀದಿಸಬಹುದು ಎಂದು ಮನೋಜ್ ಕುಮಾರ್ ಮಾಹಿತಿ ನೀಡಿದರು.

ಇಂತಹ ಬೋಟಿಕ್ ಗಳಿಂದ ಸಂಸ್ಥೆಯ ವಹಿವಾಟು ಶೇಕಡ 30ರಿಂದ 40ರಷ್ಟು ಏರಿಕೆಯಾಗಲಿದೆ. ಇಲ್ಲಿ ಸಿಗುವ ಬ್ರಾಂಡೆಡ್ ಮದ್ಯದ ಬಗೆಗಳಿಗೆ ಗುಣಮಟ್ಟದ ಖಾತ್ರಿ ಇರಲಿದೆ. ಈ ಮೂಲಕ ಸಂಸ್ಥೆಯು ಹೊಸ ಹೆಜ್ಜೆ ಇಡುತ್ತಿದೆ. ಸಂಸ್ಥೆಯು ವಹಿವಾಟನ್ನು 4 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ವಾರ್ಷಿಕ 10 ಸಾವಿರ ಕೋಟಿ ರೂ. ಮೊತ್ತದ ಚಿಟ್ ಫಂಡ್ ವ್ಯವಹಾರ, ಲೇಖನ ಸಾಮಗ್ರಿಗಳ ಮಾರಾಟಕ್ಕೆ ಫ್ರಾಂಚೈಸಿಗಳ ಆರಂಭ, 10 ಮೆಗಾ ಮೆಡಿಕಲ್ ಶಾಪ್ ಆರಂಭ ಮುಂತಾದ ಉಪಕ್ರಮಗಳನ್ನು ಕೈಗೊಳ್ಳಲಿದೆ. ಜೊತೆಗೆ ಪ್ರತಿಯೊಂದು ವಹಿವಾಟಿನಲ್ಲೂ ಕಾರ್ಪೊರೇಟ್ ಸ್ಪರ್ಶ ನೀಡಲಾಗುವುದು ಎಂದು ಅವರು ವಿವರಿಸಿದರು.

ಎಂಎಸ್ಐಎಲ್ ನಿರ್ದೇಶಕ ಎ.ಎಂ.ಚಂದ್ರಪ್ಪ,ಪ್ರಧಾನ ವ್ಯವಸ್ಥಾಪಕ (ಮೂಲಸೌಕರ್ಯ) ಕೆ.ರವಿಕುಮಾರ್ , ಪ್ರಧಾ‌ನ ವ್ಯವಸ್ಥಾಪಕ ರಾದ ಬಸವರಾಜ, ಚಂದ್ರಶೇಖರ, ಸಿಎಫ್ಒ ಅವಿನಾಶ ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಣೆ – ದೂರು/ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಣೆಚಲನಚಿತ್ರ ಪೋಷಕ ಕಲಾವಿದರ ಸಂಘದ ಚುನಾವಣೆಗೆ ನ್ಯಾಯಾಲಯದ ತಡೆಭಾರತಿ ಟೀಚರ್ 7ನೇ ತರಗತಿಗೆ @ 50ರ ಸಂಭ್ರಮಕಾಂಗ್ರೆಸ್ ಪಕ್ಷಕ್ಕೆ ವಿಚ್ಛೇದನ ಕೊಟ್ಟಿದ್ದಕ್ಕೆ ಕಾರಣ ಕೊಟ್ಟ ಮಾಜಿ ಪ್ರಧಾನಿಗಳುಅಂಕಿ-ಅಂಶಗಳ ಬಜೆಟ್‌, ದಿಕ್ಕು ದಿಸೆಯಿಲ್ಲದ ಆಯವ್ಯಯ’: ಅರವಿಂದ ಬೆಲ್ಲದಮಾ.21ರಂದು ರಾಮಾನಂದಾಚಾರ್ಯರ ಆಧ್ಯಾತ್ಮಿಕ ಪ್ರವಚನಗ್ರಾಮ ಸಹಾಯಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಸಹಕಾರಿ ಧುರೀಣ ಕೆ.ಹೆಚ್ ಪಾಟೀಲರು ಅಪರೂಪದ ರಾಜಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯಜನ್ಮಧಾತೆ ಕನ್ನಡ ಸಿನೆಮಾ ಮಾ.20 ರಂದು ಪ್ರದರ್ಶನಕನ್ನಡಿಗರ ಉದ್ಯೋಗಿಗಳನ್ನು ಕೇಂದ್ರ ಸರ್ಕಾರ ಅತಂತ್ರ ಸ್ಥಿತಿಗೆ ತಳ್ಳಿದೆ: ಸಿಎಂ