ಮಹಾಲಿಂಗಪುರ,ಅ,೦೭ : ನವರಾತ್ರಿ ಉತ್ಸವದ ಅಂಗವಾಗಿ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಅ. ೧೧ರಿಂದ ೧೯ರವರೆಗೆ ನಿರಂತರ ಒಂಬತ್ತು ದಿನಗಳ ಕಾಲ ಭಕ್ತಿ, ಆಧ್ಯಾತ್ಮಿಕತೆ ಹಾಗೂ ಸಾಂಸ್ಕೃತಿಕ ವೈಭವದ ನವರಾತ್ರಿ ಉತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಶ್ರೀ ಬನಶಂಕರಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮಹಾಲಿಂಗಪುರ ಸಾಂಸ್ಕೃತಿಕ ಉತ್ಸವ ಸಂಘದ ಆಶ್ರಯದಲ್ಲಿ ಶ್ರೀದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದ್ದು, ಪ್ರತಿದಿನ ಸಂಜೆ ಭಕ್ತರಿಗೆ ಆಧ್ಯಾತ್ಮಿಕ ಪ್ರವಚನದ ಜತೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ದೊರೆಯಲಿದೆ ಎಂದು ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಮಲ್ಲಪ್ಪ ಬಾವಿಕಟ್ಟಿ ತಿಳಿಸಿದರು.ಬನಶಂಕರಿ ದೇವಸ್ಥಾನದ ಆವರಣದಲ್ಲಿ ಉತ್ಸವದ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳ ಶಿ?ರಾದ ಸಾಲೊಟಗಿ ಸಂಗಮೇಶ್ವರ ಸ್ವಾಮಿಗಳಿಂದ ಪ್ರತಿದಿನ ಸಂಜೆ ೭ರಿಂದ ೮ರವರೆಗೆ ಶ್ರೀದೇವಿ ಪುರಾಣದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ದಿನಕ್ಕೊಂದು ವಿಶೇಷ ಕಾರ್ಯಕ್ರಮ : ಅ. ೧೧ರಂದು ಮಹಾಲಿಂಗಪುರದ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಅ. ೧೨ರಂದು ಜೀ ಕನ್ನಡ ಸರಿಗಮಪ ಖ್ಯಾತಿಯ ರೇವಣಸಿದ್ಧ ಪುಲಾರಿ ಅವರ ತತ್ವಪದ ಗಾಯನ, ಅ. ೧೩ರಂದು ಜೀ ಕನ್ನಡ ಸರಿಗಮಪ ಖ್ಯಾತಿಯ ರಮೇಶ ಲಮಾಣಿ ಅವರ ಗಾಯನ ನಡೆಯಲಿದೆ.
ಅ. ೧೪ರಂದು ಕಲರ್ಸ್ ಕನ್ನಡ ಖ್ಯಾತಿಯ ಮಹಾನ್ಯಾ ಪಾಟೀಲ ಅವರ ಸಂಗೀತ ಸಂಜೆ, ಅ. ೧೫ರಂದು ವಿಕೆ ಸ್ಟೈಲ್ ಆ?ಯಂಡ್ ಫಿಟ್ನೆಸ್ ಅಕಾಡೆಮಿಯ ನೃತ್ಯ ವೈಭವ, ಅ. ೧೬ರಂದು ಹೊಸಪೇಟೆಯ ನಾಟ್ಯನಾದ ಕಲಾ ತಂಡದಿಂದ ಜನಪದ ಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ. ೧೭ರಂದು ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕ ಡಾ. ನಾಗರಾಜ ತೊಂಬ್ರಿ ಅವರಿಂದ ಜೋಗಿಪದ ಗಾಯನ, ಅ. ೧೮ರಂದು ಚಲನಚಿತ್ರ ಸಂಗೀತ ನಿರ್ದೇಶಕ ರವೀಂದ್ರ ಸೋರಗಾಂವಿ ಅವರಿಂದ ಸುಗಮ ಸಂಗೀತ ಹಾಗೂ ಅ. ೧೯ರಂದು ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಇದರೊಂದಿಗೆ ಅ. ೧೩ರಂದು ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ವತಿಯಿಂದ ಕುಂಕುಮಾರ್ಚನೆ, ಅ. ೧೬ರಂದು ಶೋಭಾ ಚಂದ್ರಶೇಖರ ಹುಣಶ್ಯಾಳ ಬಂಧುಗಳ ವತಿಯಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಅಮ್ಮಜರಿಯ ಸ್ವಾಮಿ ಜ್ಞಾನಮಯಾನಂದ ಶ್ರೀಗಳು ಹಾಗೂ ಸಹಜಾನಂದ ಮಹಾಸ್ವಾಮಿಗಳಿಂದ ಪ್ರವಚನ ಮತ್ತು ಆಶೀರ್ವಚನ ಕಾರ್ಯಕ್ರಮವೂ ನಡೆಯಲಿದೆ.ನವರಾತ್ರಿ ಉತ್ಸವವನ್ನು ಯಶಸ್ವಿಗೊಳಿಸಲು ದೇವಸ್ಥಾನದ ಆಡಳಿತ ಮಂಡಳಿ, ಉತ್ಸವ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಉತ್ಸವ ಸಮಿತಿ ಉಪಾಧ್ಯಕ್ಷ ಲಕ್ಕಪ್ಪ ಚಮಕೇರಿ, ಕಾರ್ಯದರ್ಶಿ ವಿನೋದ ಚಮಕೇರಿ, ಖಜಾಂಚಿ ಸುನಿಲ ಜಮಖಂಡಿ, ಸಹಕಾರ್ಯದರ್ಶಿ ಮಹಾಲಿಂಗ ಹಾವನಳ್ಳಿ, ಹಿರಿಯರಾದ ಸಿದ್ದಗಿರೆಪ್ಪ ಕಾಗಿ, ಡಾ. ಬಿ.ಡಿ. ಸೋರಗಾಂವಿ, ನಾರಾಯಣ ಕಿರಿಗಿ, ಈಶ್ವರ ವಂದಾಲ, ಶ್ರೀಶೈಲ ಕಿರಗಟಗಿ, ಜಿ.ಎಸ್. ಗೊಂಬಿ, ಬಿ.ಸಿ. ಪೂಜಾರ, ಮಲ್ಲಪ್ಪ ನಿಂಬರಗಿ, ಅಶೋಕ ಬಾಣಕಾರ, ಮಹಾದೇವ ಚಮಕೇರಿ, ವಿಜಯ ಬಾಡನವರ, ಶಿವಾನಂದ ಕಿತ್ತೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.